ಬೆಂಗಳೂರು: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವಹಿಸಲಾಗಿದ್ದು, ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸಬೇಕೆಂದು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಘಟನೆ ಕುರಿತು ಎಲ್ಲಾ ವಿವರಗಳನ್ನು ಪಡೆದುಕೊಂಡು ತನಿಖೆ ಮುಂದುವರೆಸಲಿದ್ದಾರೆ. ಸದ್ಯಕ್ಕೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಇನ್ನೂ ನನಗೆ ಮಾಹಿತಿ ನೀಡಿಲ್ಲ, ನನಗೆ ನೇರವಾಗಿ ವರದಿ ನೀಡಿ ಎಂದು ಸೂಚನೆ ನೀಡಿದ್ದೇನೆ ಎಂದರು.
ಈಗಾಗಲೇ ರೇಪ್ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಡಿಜಿಪಿ ಇಂದು ಮೈಸೂರಿಗೆ ತೆರಳಲಿದ್ದಾರೆ. ಖುದ್ದು ಅವರೇ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಅತಿ ಶೀಘ್ರದಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕು ಎನ್ನುವ ಸೂಚನೆಯನ್ನು ನೀಡಿದ್ದೇನೆ ಎಂದರು.
ಸೆ.1 ರಿಂದ ಪ್ರತಿದಿನ 5 ಲಕ್ಷ ಲಸಿಕೆ:ನಮ್ಮ ರಾಜ್ಯಕ್ಕೆ ಕೊರೊನಾ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ತರುವುದು ದೆಹಲಿ ಪ್ರವಾಸದ ಮುಖ್ಯ ಕಾರಣವಾಗಿತ್ತು. ಅದಕ್ಕಾಗಿ ಕೇಂದ್ರ ಆರೋಗ್ಯ ಸಚಿವರ ಬಳಿ ಚರ್ಚೆ ಮಾಡಿ ಸೆಪ್ಟೆಂಬರ್ ತಿಂಗಳಿನಿಂದ ಪ್ರತಿದಿನ ಐದು ಲಕ್ಷ ವ್ಯಾಕ್ಸಿನೇಷನ್ ಮಾಡುವ ಕಾರ್ಯಕ್ರಮ ಇರಿಸಿಕೊಂಡಿದ್ದೇವೆ. ಅದಕ್ಕೆ ನಿಮ್ಮ ಸಂಪೂರ್ಣವಾದ ಬೆಂಬಲ ಬೇಕು ಎಂದು ಕೇಳಿದ್ದೇವೆ. ಅದಕ್ಕೆ ಸಚಿವರು ಸಂಪೂರ್ಣ ಬೆಂಬಲ ನೀಡಿದ್ದು, ಅಗತ್ಯ ದಾಸ್ತಾನು ಕಳುಹಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ನಮ್ಮ ಉದ್ದೇಶದಂತೆ ಪ್ರತಿದಿನ ಐದು ಲಕ್ಷ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಒಂದನೇ ತಾರೀಕಿನಿಂದ ಪ್ರತಿದಿನ 5 ಲಕ್ಷ ವ್ಯಾಕ್ಸಿನೇಷನ್ ಮಾಡಲಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.
ಜಲ ವ್ಯಾಜ್ಯ ಸ್ಪೀಡ್‌ಅಪ್:ಜಲಶಕ್ತಿ ಮಂತ್ರಿಗಳ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆ. ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಎಲ್ಲಾ ಯೋಜನೆಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದ್ದೇನೆ. ಅದೇ ರೀತಿ ಸುಪ್ರೀಂಕೋರ್ಟ್ನಲ್ಲಿರುವ ನಮ್ಮ ಜಲವಿವಾದಗಳ ಬಗ್ಗೆ ನಮ್ಮ ಹಿರಿಯ ವಕೀಲರ ತಂಡದ ಜೊತೆ ಚರ್ಚೆ ಮಾಡಿದ್ದೇನೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಕೊಂಡೊಯ್ಯಬೇಕು ಎನ್ನುವ ಸೂಚನೆ ನೀಡಿದ್ದೇನೆ ಎಂದರು.