ಬೆಂಗಳೂರು:ರಾಜ್ಯದ ಔದ್ಯೋಗಿಕ ವಾತಾವರಣವನ್ನು ಅಮೆರಿಕಾದಲ್ಲಿರುವವರಿಗೆ ತಿಳಿಸಿ ಇಲ್ಲಿ ಬಂಡವಾಳ ಹೂಡಿಕೆಗೆ ಪ್ರಯತ್ನ ಮಾಡಿದಲ್ಲಿ ಅಗತ್ಯ ನೆರವು, ಸಹಕಾರ ನೀಡಲಾಗುತ್ತದೆ ಎಂದು 'ಅಮೆರಿಕ ಕನ್ನಡ ಕೂಟಗಳ ಆಗರ'ಕ್ಕೆ(Association of Kannada Kootas of America(AKKA) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraja Bommai ) ಕರೆ ನೀಡಿದ್ದಾರೆ.
ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ) ವತಿಯಿಂದ ಆಯೋಜಿಸಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮ 2021' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಿವಾಸದಿಂದ ವರ್ಚುಯಲ್ ಆಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು.
ನಂತರ ಅಕ್ಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಅತ್ಯಂತ ಪುರಾತನವಾದ ಭಾಷೆ. ದೇಶದ ಮೂಲ ಭಾಷೆಗಳಲ್ಲಿ ಕನ್ನಡ ಅತ್ಯಂತ ಹಿರಿಯ ಭಾಷೆ, ಅತ್ಯಂತ ಪುರಾತನವಾದ ಭಾಷೆಯಾಗಿದೆ. ತಮಿಳಿಗಿಂತ ಮೊದಲು ಕನ್ನಡ ಇತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ.
ನಮ್ಮ ಬರಹಗಾರರು, ಸಾಹಿತಿಗಳು ತಮ್ಮ ಬರವಣಿಗೆಯಿಂದ ಸಾಹಿತ್ಯದಿಂದ ಕನ್ನಡ ಭಾಷೆಯನ್ನು ಇಷ್ಟು ವರ್ಷಗಳ ಕಾಲ ಶ್ರೀಮಂತಗೊಳಿಸಿದ್ದಾರೆ. ಉತ್ಕೃಷ್ಟವಾದ ಲೇಖನ ಮತ್ತು ಸಾಹಿತ್ಯವನ್ನು ಕೊಡುವ ಮೂಲಕ ಕನ್ನಡದ ಪರಂಪರೆಯನ್ನು ಇಂದಿಗೂ ಕೂಡ ಅತ್ಯಂತ ಶ್ರೀಮಂತವಾಗಿ ಉಳಿಸಿಕೊಂಡು ಬಂದಿರುವುದನ್ನು ನಾವು ಮರೆಯುವಂತಿಲ್ಲ. ನಮ್ಮ ಮುಂದಿನ ಜನಾಂಗಕ್ಕೆ ಇದನ್ನು ತಿಳಿಸುವ ಕೆಲಸವನ್ನು ಮಾಡುವ ಕರ್ತವ್ಯ ನಮ್ಮದಾಗಿದೆ ಎಂದರು.
ಕನ್ನಡಿಗರಿಗೆ ಉದ್ಯೋಗ:
ಕರ್ನಾಟಕ ಸರ್ಕಾರ ಕನ್ನಡದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಕನ್ನಡವನ್ನು ನಾವು ಬೆಳೆಸಬೇಕು ಎನ್ನುವ ಕಾರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಡಳಿತದಲ್ಲಿ ಕನ್ನಡ, ಇ- ಆಡಳಿತದಲ್ಲಿ ಕನ್ನಡ, ಎಲ್ಲ ಸಂದರ್ಭದಲ್ಲಿ ಕನ್ನಡ ಬಳಕೆ ಹಾಗೂ ಉದ್ಯೋಗದಲ್ಲಿ ಕನ್ನಡವನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿದ್ದೇವೆ.
ಹಲವಾರು ಬಾರಿ ಈ ಪ್ರಯತ್ನಗಳು ಸಫಲ ಕಂಡಿಲ್ಲ. ಹಾಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಬರುವ ದಿನಗಳಲ್ಲಿ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಅತಿ ಹೆಚ್ಚು ಉದ್ಯೋಗ ಕೊಡಬೇಕು ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಕಾನೂನಿನಲ್ಲಿಯೂ ಇದೆ. ಅದನ್ನು ಅಕ್ಷರಶಃ ಪಾಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಬಡ ಕನ್ನಡಿಗನಿಗೆ ತರಬೇತಿ:
ಕಡು ಬಡವ ಕನ್ನಡಿಗನಿಗೆ ಆರ್ಥಿಕ ಸಬಲತೆ ಕೊಡುವ ಅವಶ್ಯಕತೆ ಇದೆ. ಇದನ್ನು ನಾವು ಮನಗಂಡಿದ್ದೇವೆ. ಅದನ್ನು ಮಾಡುವ ಕೆಲಸವನ್ನು ಮಾಡುತ್ತೇವೆ. ಅದಕ್ಕೆ ಪೂರಕವಾಗಿ ನಮಗೆ ಶಿಕ್ಷಣ ಕ್ಷೇತ್ರದ ಬೆಂಬಲ ಬೇಕು. ಕೌಶಲ್ಯ ತರಬೇತಿ ಬಹಳ ಅವಶ್ಯಕತೆ ಇದೆ. ಉನ್ನತ ಶಿಕ್ಷಣವನ್ನು ನಾವು ಕನ್ನಡದಲ್ಲಿ ಮಾಡಬೇಕು. ಇದಕ್ಕೆ ಹಲವಾರು ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.