ಬೆಂಗಳೂರು :ನಿನ್ನೆ (ಭಾನುವಾರ) ರಾತ್ರಿ ಸುರಿದ ಧಾರಾಕಾರ ಮಳೆಗೆ ಎಲ್ಲಾ ವಲಯಗಳ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು, ಕೊಳಚೆ ನೀರು ನುಗ್ಗಿದೆ. ನೀರನ್ನು ತೆರವು ಮಾಡುವುದು ನಮ್ಮ ಮೊದಲ ಆದ್ಯತೆ. ಇದಕ್ಕೆ ತಕ್ಷಣ ಹಣಕಾಸಿನ ನೆರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಳೆ ಹಾನಿ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.. ರಾಜಾಜಿನಗರ ಕ್ಷೇತ್ರದ ಶಿವನಗರ ಮೇಲ್ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಮಳೆ ಹಾನಿ ಕುರಿತು ಮಾತನಾಡಿದ ಅವರು, ನಿನ್ನೆ ಮಲ್ಲತ್ತಹಳ್ಳಿ ಕೆರೆ, ಪಶ್ಚಿಮ ವಲಯದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮನೆಗಳಿಗೆ, ಸೇತುವೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೆ ನೀರು ಬಂದಿದೆ.
ವಲಯ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾನೇ ಖುದ್ದಾಗಿ ಗಮನಿಸ್ತಿದ್ದೇನೆ. ನಿನ್ನೆಯಿಂದ ಆಯುಕ್ತರ ಜತೆ ಸಂಪರ್ಕದಲ್ಲಿದ್ದೇನೆ ಎಂದರು.
ರಸ್ತೆಗಳ ಮೇಲಿನ ನೀರು ತೆಗೆದು ವಾಹನ ಓಡಾಟ ಸುಗಮ ಮಾಡಬೇಕಿದೆ. ಮಳೆಯಿಂದ ವಾಹನಗಳ ಮೇಲೆ ಮರ, ಗಿಡ ಬಿದ್ದು ಜಖಂಗೊಂಡಿವೆ. ಕೆಲವೆಡೆ ಹಸುಗಳು ಮೃತಪಟ್ಟಿವೆ. ಹಳೆಯ ಕಟ್ಟಡಗಳು ಹಾನಿಗೊಂಡಿವೆ. ಇವೆಲ್ಲದರ ಬಗ್ಗೆ ತಡಮಾಡದೆ ಕ್ರಮ ಕೈಗೊಳ್ಳುತ್ತೇವೆ. ಹಳೆಯ ಕಟ್ಟೆಗಳು, ಅವುಗಳ ಬಾಳಿಕೆ ಬಗ್ಗೆ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಗುಡುಗು ಸಹಿತ ಅಬ್ಬರಿಸಿದ ಮಳೆ