ಬೆಂಗಳೂರು :ನಾಳೆಯಿಂದ ಎರಡು ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಫಿಕ್ಸ್ ಆಗಿದೆ. ಜಲಶಕ್ತಿ ಸಚಿವರ ಭೇಟಿಗೆ ಸಮಯ ನಿಗದಿಯಾಗಿದೆ. ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳುವ ವಿಚಾರ ಸಂಬಂಧ ನಾಳೆ ಮಧ್ಯಾಹ್ನ 1.55ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಮುಖ್ಯಮಂತ್ರಿ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತೆರಳಲಿದ್ದಾರೆ. ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು, ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಹತ್ವದ ಮಾತುಕತೆ ನಡೆಯಲಿದೆ.
ಈಗಾಗಲೇ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಮೇಕೆದಾಟು ಸೇರಿದಂತೆ ನೀರಾವರಿ ಯೋಜನೆಗಳ ಕುರಿತು ಸಭೆ ನಡೆಸಿದ ನಂತರ ವರಿಷ್ಠರ ಭೇಟಿಗೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಅದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಇತರೆ ಕೆಲವು ಕೇಂದ್ರ ಸಚಿವರ ಅಪಾಯಿಂಟ್ಮೆಂಟ್ಗೆ ಪ್ರಯತ್ನಿಸುತ್ತಿದ್ದಾರೆ.
ಮುಂದಾಲೋಚನೆಯಿಂದಾಗಿಯೇ ಸಿಎಂ ಎರಡು ದಿನಗಳ ಪ್ರವಾಸಕ್ಕೆ ಸಮಯ ನಿಗದಿಪಡಿಸಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಯುಗಾದಿ ಮುಗಿದಿರುವ ಹಿನ್ನೆಲೆ ಸಂಪುಟ ಸರ್ಜರಿ ಕಸರತ್ತು ಆರಂಭಗೊಳ್ಳುವ ಸಾಧ್ಯತೆ ಇರುವುದರಿಂದ ಸಿಎಂ ದೆಹಲಿ ಪ್ರವಾಸ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ನೀರಾವರಿ ನಿಗಮಗಳ ಜೊತೆ ಇಂದು ಸಿಎಂ ಸರಣಿ ಸಭೆ: ದೆಹಲಿ ಭೇಟಿಗೂ ಮುನ್ನ ಮಾಹಿತಿ ಸಂಗ್ರಹ