ಬೆಂಗಳೂರು:ಬರುವ ದಿನಗಳಲ್ಲಿ ಅಪ್ಪು ಅವರಿಗೆ ಜನರ ಪ್ರೀತಿಯಾನುಸಾರ ಸರ್ಕಾರ ಗೌರವ ಕೊಡಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸದಾಶಿವನಗರದಲ್ಲಿರುವ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಅಕ್ಕರೆಯ ಪುನೀತ್ ಅವರನ್ನು ಕಳೆದುಕೊಂಡು 8 ದಿನಗಳಾಯಿತು. ಅಶೋಕ್, ಅಶ್ವಥ್ ನಾರಾಯಣ್ ಸಮೇತರಾಗಿ ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಬಂದಿದ್ದೆವು. ಕುಟುಂಬದ ಎಲ್ಲ ಸದಸ್ಯರ ಜತೆ ಮಾತನಾಡಿ, ಮುಂದೆ ಆಗಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಪುನೀತ್ ರಾಜಕುಮಾರ ಕನ್ನಡದ ಆಸ್ತಿ. ಇವತ್ತು ಕೂಡ ಸಾರ್ವಜನಿಕರು ಅವರ ದರ್ಶನ ದೊಡ್ಡ ಸಂಖ್ಯೆಯಲ್ಲಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವ ಬಗ್ಗೆ ಕುಟುಂಬಸ್ಥರು ಚರ್ಚಿಸಿದ್ದು, ಈ ಎಲ್ಲ ಕಾರ್ಯಗಳ ಜತೆ ಸರ್ಕಾರ ಜೊತೆ ಇರಲಿದೆ ಎಂದರು.
ನಮಗೂ ಬೇಸರ ಭಾವ ಇದೆ, ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಕುಟುಂಬದವರಿಗೆ ಸಾಂತ್ವನ, ಧೈರ್ಯ ಹೇಳಿ, ಇಡೀ ಕರ್ನಾಟಕ ನಿಮ್ಮ ಜತೆ ಇದೆ ಎಂದು ಹೇಳಿದ್ದೇವೆ. ಫಿಲ್ಮ್ ಚೇಂಬರ್ ವತಿಯಿಂದ ನವೆಂಬರ್ 16 ಕ್ಕೆ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಸಭೆ ನಾಳೆ ನಡೆಯಲಿದೆ, ಇದಕ್ಕೂ ಸರ್ಕಾರ ಸಕಲ ಬೆಂಬಲ ನೀಡುತ್ತದೆ. ಸಿದ್ಧತೆ ಕುರಿತು ಸರ್ಕಾರಕ್ಕೆ ಪುನೀತ್ ಕುಟುಂಬ ಪ್ರೀತಿಯ ಧನ್ಯವಾದ ತಿಳಿಸಿದೆ. ಆದರೆ ಇದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ಪುನೀತ್ ರಾಜಕುಮಾರ ಮನೆಗೆ ಸಿಎಂ ಭೇಟಿ
ಪುನೀತ್ ರಾಜಕುಮಾರ ಮನೆಗೆ ಸಿಎಂ ಭೇಟಿ ಅಂತ್ಯಕ್ರಿಯೆ ಬಳಿಕ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಸಿಎಂ ಭೇಟಿ ನೀಡಿರಲಿಲ್ಲ. ಹೀಗಾಗಿ ಇಂದು ಸಂಜೆ ಸದಾಶಿವನಗರದಲ್ಲಿನ ಅಪ್ಪು ಮನೆಗೆ ತೆರಳಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ:ಅಪ್ಪು ನೆನೆದು ಕಣ್ಣೀರು ಹಾಕಿದ ಸಿಂಗಂ ಖ್ಯಾತಿಯ ತಮಿಳು ನಟ ಸೂರ್ಯ