ಕರ್ನಾಟಕ

karnataka

ETV Bharat / city

ಶಿಷ್ಯನ ನೆರವಿಗೆ ಧಾವಿಸಿದ BSY : ಖಾತೆ ಅತೃಪ್ತಿ ಶಮನ ಮಾಡುವಲ್ಲಿ ಬೊಮ್ಮಾಯಿ ಸಫಲ

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಕೆಲ ದಿನಗಳಲ್ಲೇ ಪಕ್ಷದಲ್ಲಿ ಕೆಲವರಿಂದ ಭುಗಿಲೆದ್ದಿದ್ದ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಬೊಮ್ಮಾಯಿ ಸಫಲರಾಗಿದ್ದಾರೆ. ಮಾಜಿ ಸಿಎಂ ಬಿಎಸ್​ವೈ ಮಧ್ಯೆಸ್ಥಿಕೆಯಿಂದ ರೆಬೆಲ್​ ನಾಯಕರು ತಣ್ಣಗಾಗಿದ್ದಾರೆ.

Bangalore
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಬಿ.ಎಸ್​​. ಯಡಿಯೂರಪ್ಪ

By

Published : Aug 11, 2021, 5:22 PM IST

Updated : Aug 11, 2021, 5:54 PM IST

ಬೆಂಗಳೂರು :ರಾಜ್ಯ ಬಿಜೆಪಿ ಪಾಳಯದಲ್ಲಿ ತಲೆದೋರಿರುವ ಅಸಮಾಧಾನಕ್ಕೆ ಮುಲಾಮು ಹಚ್ಚುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಫಲರಾಗಿದ್ದಾರೆ. ಯಡಿಯೂರಪ್ಪ ಮೂಲಕವೇ ಶ್ರೀರಾಮುಲು, ಎಂಟಿಬಿ ನಾಗರಾಜ್ ಅವರುಗಳ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದ್ ಸಿಂಗ್ ಕೂಡ ಬಹುತೇಕ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದು, ಆರಂಭಿಕ ಬಿಕ್ಕಟ್ಟಿನಿಂದ ಬೊಮ್ಮಾಯಿ ಪಾರಾಗಿದ್ದಾರೆ.

ಸಾರಿಗೆ ಖಾತೆಗೆ ಶ್ರೀರಾಮುಲು ಒಪ್ಪಿಗೆ..

ಖಾತೆ ಹಂಚಿಕೆ ಬೆನ್ನಲ್ಲೇ ತಲೆದೋರಿದ್ದ ಸಚಿವರ ಅಸಮಾಧಾನವನ್ನು ಪರಿಹರಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಫಲರಾಗಿದ್ದಾರೆ. ಬಿಕ್ಕಟ್ಟು ಎದುರಾಗುತ್ತಿದ್ದಂತೆ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಜತೆ ಸಮಾಲೋಚನೆ ನಡೆಸಿದ್ದ ಸಿಎಂ, ಸಾರಿಗೆ ಖಾತೆಗೆ ಬೇಸರಗೊಂಡಿದ್ದ ಶ್ರೀರಾಮುಲು ಅವರನ್ನು ಗೃಹ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು.‌

ಸುದೀರ್ಘವಾದ ಚರ್ಚೆ ನಡೆಸಿ ಮನವೊಲಿಸಿದರು. ಯಡಿಯೂರಪ್ಪ ನೀಡಿರುವ ಸಲಹೆ-ಸೂಚನೆಗಳ ಬಗ್ಗೆಯೂ ಮಾಹಿತಿ ನೀಡಿದರು. ಅಂತಿಮವಾಗಿ ಸಾರಿಗೆ ಖಾತೆ ಒಪ್ಪಿಕೊಳ್ಳುವುದಾಗಿ ಸಿಎಂಗೆ ತಿಳಿಸಿ ಸಿಎಂ ಕಚೇರಿಯಿಂದ ಸಚಿವ ಶ್ರೀರಾಮುಲು ನಿರ್ಗಮಿಸಿದರು. ಈ ವಿಚಾರವನ್ನು ಮಾಧ್ಯಮಗಳ ಜೊತೆಯಲ್ಲಿ ಹಂಚಿಕೊಂಡ ಅವರು, ನನಗೆ ಯಾವುದೇ ಅಸಮಾಧಾನವಿಲ್ಲ. ಸಾರಿಗೆ ಖಾತೆ ನಿರ್ವಹಿಸುತ್ತೇನೆ ಎಂದು ಶ್ರೀರಾಮುಲು ತಿಳಿಸಿದರು.

ಎಂಟಿಬಿ ಮನವೊಲಿಕೆ..

ಮತ್ತೋರ್ವ ಅಸಮಾಧಾನಿತ ಸಚಿವ ಎಂಟಿಬಿ ನಾಗರಾಜ್ ಜೊತೆಯಲ್ಲಿಯೂ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದರು. ಪೌರಾಡಳಿತ ಖಾತೆ ಉತ್ತಮವಾದ ಖಾತೆ. ಕೆಲಸ ಮಾಡಲು ಹೆಚ್ಚಿನ ಅವಕಾಶವೂ ಇದೆ. ಅಬಕಾರಿ ಖಾತೆ ಬೇಡ ಎಂದಾಗ ಯಡಿಯೂರಪ್ಪ ನೀಡಿದ್ದ ಖಾತೆಯನ್ನೇ ಪುನಃ ನೀಡಲಾಗಿದೆ.

ನಿಮ್ಮ ವಿಚಾರದಲ್ಲಿ ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿಯೇ ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ತಿಳಿಸಿದರು. ಯಡಿಯೂರಪ್ಪ ಜೊತೆ ಮಾತನಾಡಿದ ನಂತರ ಎಂಟಿಬಿ ನಾಗರಾಜ್ ಪೌರಾಡಳಿತ ಖಾತೆಯನ್ನೇ ನಿರ್ವಹಿಸುವ ನಿರ್ಧಾರ ಪ್ರಕಟಿಸಿದರು. ಈ ವಿಷಯವನ್ನು ಸಿಎಂ ಬೊಮ್ಮಾಯಿ ಖಚಿತಪಡಿಸಿದರು.

ಆನಂದ ಸಿಂಗ್ ಯೂ ಟರ್ನ್​..

ಈಗ ಜಟಿಲವಾಗಿ ಉಳಿದಿರುವುದು ಆನಂದ್ ಸಿಂಗ್ ವಿಚಾರ ಮಾತ್ರ. ಆನಂದ್ ಸಿಂಗ್ ವಿಚಾರವಾಗಿ ಬಿಎಸ್​​ವೈ ಜೊತೆಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಮಧ್ಯಪ್ರವೇಶ ಮಾಡಿ ಆನಂದ್ ಸಿಂಗ್ ಮನವೊಲಿಸುವಂತೆ ಮನವಿ ಮಾಡಿದ್ದಾರೆ. ಬಿಎಸ್​ವೈ ಸೂಚನೆಯಂತೆ ಸಚಿವ ಆರ್.ಅಶೋಕ್ ಮತ್ತು ಸಿಂಗ್ ಆಪ್ತರಾದ ಶಾಸಕ ರಾಜುಗೌಡ ಮಾತುಕತೆ ನಡೆಸಿ ಯಡಿಯೂರಪ್ಪ ನೀಡಿರುವ ಸಂದೇಶವನ್ನು ತಲುಪಿಸಿ ಮನವೊಲಿಸಿದ್ದಾರೆ. ಹಾಗಾಗಿಯೇ, ಆನಂದ್ ಸಿಂಗ್ ರಾಜೀನಾಮೆ ನಿರ್ಧಾರಕ್ಕೆ ಬಂದು ನಂತರ ಯೂ ಟರ್ನ್ ಆಗಿದ್ದಾರೆ.

ಮಾಧ್ಯಮಗೋಷ್ಟಿ ನಡೆಸಿದ ಆನಂದ್ ಸಿಂಗ್ ಅವರು, ಮಾಜಿ ಸಿಎಂ ಯಡಿಯೂರಪ್ಪ ನಾನು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ. ವಿಜಯನಗರ ಹೊಸ ಜಿಲ್ಲೆ ಕೇಳಿದಾಗ ಕೊಟ್ಟರು. ಏತ ನೀರಾವರಿ ಯೋಜನೆ ಮಂಜೂರು ಮಾಡಿದರು. ಅವರ ಮೇಲೆ ಮತ್ತೆ ಒತ್ತಡ ಹೇರಲು ಇಷ್ಟವಿಲ್ಲ. ಅವರೇ ಸಿಎಂ ಆಗಿದ್ದಿದ್ದರೆ ನಾನು ಈ ನಿರ್ಧಾರಕ್ಕೆ ಬರುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿ ಅಸಮಾಧಾನದ ಪಟ್ಟು ಸಡಿಲಿಸಿದ್ದಾರೆ.

ಯಡಿಯೂರಪ್ಪ ಸೂಚನೆಯಂತೆ ಆನಂದ್ ಸಿಂಗ್‌ಗೆ ಬುಲಾವ್ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಕುಳಿತು ಮಾತನಾಡು ಮೂಲಕ ಅತೃಪ್ತಿ ಶಮನಕ್ಕೆ ಮುಂದಾಗಿದ್ದಾರೆ‌. ಸಿಂಗ್ ಮಾತುಕತೆಗೆ ಒಪ್ಪಿಕೊಳ್ಳದಿದ್ದಲ್ಲಿ ನಂತರ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ.

ಸಚಿವ ಸ್ಥಾನ ವಂಚಿತರ ಸಂಧಾನ :ಸಚಿವ ಸ್ಥಾನ ವಂಚಿತರ ಜೊತೆಯಲ್ಲೂ ಸಚಿವರ ಮೂಲಕ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಫಲರಾಗಿದ್ದಾರೆ. ಅಸಮಾಧಾನಗೊಂಡಿದ್ದ ರಾಜುಗೌಡ ಮೊದಲ ದಿನವೇ ಮುನಿಸು ಕೈಬಿಟ್ಟಿದ್ದು, ಇದೀಗ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವೊಲಿಕೆ ಮಾಡಿದ್ದಾರೆ. ಶಾಸಕ ಪ್ರೀತಂ ಗೌಡ ಜೊತೆ ಮಾತುಕತೆ ನಡೆಸಿ ತಿಳಿ ಹೇಳಿ ಕಳುಹಿಸಿದ್ದಾರೆ. ರೇಣುಕಾಚಾರ್ಯ ಮಾತ್ರ ಅಸಮಾಧಾನ ವ್ಯಕ್ತಪಡಿಸದಿದ್ದರೂ ಇನ್ನು ದೆಹಲಿ ದಂಡಯಾತ್ರೆ ಮುಂದುವರೆಸಿದ್ದಾರೆ.

ಜಾರಕಿಹೊಳಿ ಮುನಿಸು :ಸಚಿವ ಸಂಪುಟದಲ್ಲಿ ತಮ್ಮ ಆಪ್ತರಾದ ಶ್ರೀಮಂತ ಪಾಟೀಲ್ ಅವರನ್ನು ಕೈಬಿಟ್ಟಿರುವುದು ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಪರಿಗಣಿಸದೆ ಇರುವುದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸುತ್ತಿದ್ದಾರೆ. ಆಪ್ತರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ಸರ್ಕಸ್ ನಡೆಸುತ್ತಿದ್ದಾರೆ. ಆದರೆ, ಇದನ್ನು ಹೈಕಮಾಂಡ್ ಮಟ್ಟಕ್ಕೆ ಬಿಟ್ಟಿರುವ ಬೊಮ್ಮಾಯಿ, ಸದ್ಯ ಖಾತೆ ಹಂಚಿಕೆ ಅಸಮಾಧಾನ ಶಮನದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭಿಕ‌ ಸಂಕಷ್ಟದಿಂದ ಹೊರ ಬರುವಲ್ಲಿ ಸಫಲರಾಗುತ್ತಿದ್ದಾರೆ.‌ ಶಿಷ್ಯನ ನೆರವಿಗೆ ಧಾವಿಸಿರುವ ಮಾಜಿ ಸಿಎಂ ಬಿಎಸ್​ವೈ, ಅಸಮಾಧಾನ ಶಮನಕ್ಕೆ ಅಗತ್ಯ ಸಲಹೆ- ಸೂಚನೆ ನೀಡಿ, ಅಸಮಾಧಾನಿತರಿಗೆ ತಿಳಿ ಹೇಳುವ ಮೂಲಕ ಬಿಜೆಪಿ ಸರ್ಕಾರಕ್ಕೆ ಎದುರಾಗಿದ್ದ ಸಚಿವರ ಅಸಮಾಧಾನ ಸಮಸ್ಯೆ ಪರಿಹರಿಸಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ಭೇಟಿಯಾಗಿ ನಿರ್ಗಮಿಸಿದ ಸಚಿವ ಆನಂದ್ ಸಿಂಗ್ !

Last Updated : Aug 11, 2021, 5:54 PM IST

ABOUT THE AUTHOR

...view details