ಬೆಂಗಳೂರು :ಸಚಿವರಾದ ಬೈರತಿ ಬಸವರಾಜ್ ಹಾಗೂ ಮುನಿರತ್ನ ಅವರು ಮಂತ್ರಿಸ್ಥಾನಕ್ಕಾಗಿ ಬಿಜೆಪಿಗೆ ಬರಲಿಲ್ಲ. ರಿಸ್ಕ್ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಎಂದು ಸಂಸದ ಡಿ ಕೆ ಸುರೇಶ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಇಂದು ನಾನು ಮಲ್ಲತ್ತಹಳ್ಳಿ ಕರೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದೇನೆ.
ಈ ಕೆರೆಯ ಅಭಿವೃದ್ಧಿ ಬಹಳ ವರ್ಷಗಳ ಹಿಂದಿನ ಕನಸು. ಮಲ್ಲತ್ತಹಳ್ಳಿ ಕೆರೆಯನ್ನ ಹಿಂದೆ ಜೆ. ಹೆಚ್. ಪಾಟೇಲ್ ಸಿಎಂ ಆಗಿದ್ದ ವೇಳೆ, ಅಶೋಕ್ ಈ ಭಾಗದ ಶಾಸಕರಾಗಿದ್ರು. ಆ ವೇಳೆಯ ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿ ಪ್ರಾರಂಭವಾಗಿತ್ತು.
ರಾಜರಾಜೇಶ್ವರಿ ನಗರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ಕೆರೆಗಳು ಮುಕ್ತಿಗೊಳ್ಳಬೇಕು. ಇದಕ್ಕೆ ನಾವು ಮೊದಲ ಆದ್ಯತೆ ಕೊಡ್ತೀವಿ. ಮಲ್ಲತ್ತಹಳ್ಳಿ ಕೆರೆ 71 ಎಕರೆ ವಿಸ್ತೀರ್ಣವನ್ನು ಹೊಂದಿದೆ. 81 ಕೋಟಿ ರೂ. ಸರ್ಕಾರ ಕೊಡ್ತಾಯಿದೆ. ಈ ಕೆರೆಯಲ್ಲಿ ವಾಕಿಂಗ್ ಪಾಥ್, ಉದ್ಯಾನವನ ಸೇರಿ ಎಲ್ಲಾ ಒಳಗೊಂಡ ಸುಂದರ ಕೆರೆ ಇದಾಗಲಿದೆ.
ಸಚಿವ ಮುನಿರತ್ನ ಆ ಕೆಲಸ ಮಾಡ್ತಾರೆ. ಅವರು ಮೊದಲೇ ಚಿತ್ರರಂಗದಿಂದ ಬಂದವರು. ಹಿಂದೆ ಏಕೆ ಮೂರು ಭಾರಿ ಗುದ್ದಲಿ ಪೂಜೆ ಆಯ್ತು ನನಗೆ ಗೊತ್ತಿಲ್ಲ. ಮೊನ್ನೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಬಳಿಕ ಈ ಕೆರೆ ಅಭಿವೃದ್ಧಿಗೆ ಮುನಿರತ್ನ ನಿರ್ಧಾರ ಮಾಡಿದ್ದಾರೆ. ಮುನಿರತ್ನ ಅವರಿಗೆ ಒಳ್ಳೆಯದಗಾಲಿ, ಕೆರೆ ಕೂಡ ಸುಂದರವಾಗಿ ನಿರ್ಮಾಣವಾಗಲಿ, ಇಲ್ಲಿನ ಪರಿಸರ ಶುದ್ಧಿ ಆಗಲಿ ಎಂದು ಶುಭ ಕೋರುತ್ತೇನೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಮುನಿರತ್ನ, ಸುಮಾರು 73 ಎಕರೆಯಷ್ಟು ಇರುವ ಈ ಕೆರೆಯಲ್ಲಿ ಉದ್ಯಾನ ಮಾಡಲು ಸಿಎಂ ಅವಕಾಶ ಮಾಡಿ ಕೊಟ್ಟಿದ್ದಾರೆ. ಬೊಮ್ಮಾಯಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳು. 2023ಕ್ಕೆ ಮಲ್ಲತ್ತಹಳ್ಳಿ ಕೆರೆಯಲ್ಲಿ ಉದ್ಯಾನವನ ಆಗಲಿದೆ ಎಂದರು.
ಇದು 3ನೇ ಶಂಕುಸ್ಥಾಪನೆ :ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರ ಸಂದರ್ಭದಲ್ಲಿ ಈ ಕೆರೆಯ ಅಭಿವೃದ್ಧಿಗೆ ಯೋಜನೆ ಹಾಕಿತ್ತು. ಈ ಕ್ಷೇತ್ರದ ಶಾಸಕರಾದ ಮುನಿರತ್ನರವರು ಯೋಜನೆಗಳನ್ನು ರೂಪಿಸಿದ್ರು. ಕೆಲ ಬದಲಾವಣೆಯಾದರೂ ಹೊಸ ಸರ್ಕಾರ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. 73 ಎಕರೆ ಕೆರೆಯ ಅಭಿವೃದ್ಧಿ ಶಂಕುಸ್ಥಾಪನೆ ಇದು ಮೂರನೇ ಸಲ ನಡಿತಿರೋದು. ಒಳಚರಂಡಿ ನೀರು ಕೆರೆಗಳಿಗೆ ಸೇರಿ ಕಲುಷಿತವಾಗಿದೆ. ಒಳಚರಂಡಿ ನೀರು ತಡೆದು ಶುದ್ಧೀಕರಣಗೊಂಡ ನೀರನ್ನು ಕೆರೆಗೆ ಬಿಡಬೇಕು ಎಂದು ನ್ಯಾಯಲಯದ ಆದೇಶವಿದೆ. ಅದರಂತೆ ಇಲ್ಲಿ ಅಭಿವೃದ್ಧಿಯಾಗಲಿ ಎಂದು ಸರ್ಕಾರದ ಗಮನಕ್ಕೆ ತರ್ತೀನಿ. ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮಂತ್ರಿಯಾಗಲು ಬಿಜೆಪಿಗೆ ಬಂದ್ರು: ಇನ್ನು, ಕೊನೆಯಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿಗೆ ವಲಸೆ ಹೋದ ಮುನಿರತ್ನಗೆ ಪರೋಕ್ಷವಾಗಿ ಟಾಂಗ್ ನೀಡಿದ ಡಿ ಕೆ ಸುರೇಶ್, ಮುನಿರತ್ನ ಅವರು ಕಾಂಗ್ರೆಸ್‌ನಲ್ಲಿ ಮಂತ್ರಿಯಾಗಲ್ಲ ಅಂತಾ ಬಿಜೆಪಿಗೆ ಹೋಗಿ ಮಂತ್ರಿಯಾಗಿದ್ದಾರೆ. ಅಶೋಕ್ ಅವ್ರು ಒಳ್ಳೆದಲ್ವಾ ಅಂತಿದ್ದಾರೆ, ಮುಂದಕ್ಕೆ ಗೊತ್ತಾಗುತ್ತೆ ಎಂದು ಎಲ್ಲಾ ಹೇಳಿದ ನಂತರ ಭಾಷಣದ ಕೊನೆಯಲ್ಲಿ ಸುಮ್ಮನೆ ತಮಾಷೆಗೆ ಹೇಳಿದೆ ಎಂದು ಸಂಸದ ಸುರೇಶ್ ಜಾರಿಕೊಂಡರು.
ಡಿ ಕೆ ಸುರೇಶ್ ಹೇಳಿಕೆಗೆ ಸಿಎಂ ಟಾಂಗ್ : ಇದೇ ವೇಳೆ ಡಿ.ಕೆ ಸುರೇಶ್ ಹೇಳಿಕೆಗೆ ಟಾಂಗ್ ಕೊಟ್ಟ ಸಿಎಂ, ಡಿ ಕೆ ಸುರೇಶ್ ಅವರು ನನ್ನ ಆತ್ಮೀಯ ಸ್ನೇಹಿತರು, ರಾಜಕೀಯ ಎದುರಾಳಿಯೂ ಹೌದು. ಡಿ ಕೆ ಸುರೇಶ್ ಹೇಳಿದ್ರು ಮಂತ್ರಿ ಆಗಲು ಬಿಜೆಪಿಗೆ ಹೋದ್ರು ಅಂತಾ. ಬೈರತಿ ಬಸವರಾಜ್ ಹಾಗೂ ಮುನಿರತ್ನ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬಂದ್ರು. ಅವರ ರಾಜಕೀಯ ಭವಿಷ್ಯ ಅಡವಿಟ್ಟು, ರಿಸ್ಕ್ ತೆಗೆದುಕೊಂಡು, ಜನರಿಗಾಗಿ ಬಿಜೆಪಿಗೆ ಬಂದ್ರು. ಕಾಂಗ್ರೆಸ್‌ನಲ್ಲಿ ಇದ್ದಿದ್ದರೇ ಕ್ಷೇತ್ರದ ಅಭಿವೃದ್ಧಿ ಆಗಲ್ಲ ಅಂತಾ ಬಂದ್ರು. ಅದು ಏನೇ ಇರಲಿ ಜನರ ನಿರ್ಧಾರವೇ ಅಂತಿಮ ಎಂದು ಟಾಂಗ್ ಕೊಟ್ಟರು.