ಬೆಂಗಳೂರು:ಭಾರಿ ಮಳೆಯಿಂದ ನಲುಗಿರುವ ನಗರದ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಎಂಗೆ ಸಚಿವ ಬೈರತಿ ಬಸವರಾಜ ಸಾಥ್ ನೀಡಿದರು.
ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುವಾಗ ಸಿಎಂ ಬೊಮ್ಮಾಯಿ ಹೈರಾಣಾದರು. ಹೆಣ್ಣೂರು ಬಂಡೆಯಿಂದ ವಡ್ಡರಪಾಳ್ಯಕ್ಕೆ ಹಾದುಹೋಗುವ ರಾಜಕಾಲುವೆ, ಶಿರಡಿ ಸಾಯಿಬಾಬಾ ಲೇಔಟ್ನ ದುಸ್ಥಿತಿಯನ್ನು ಸಿಎಂ ಪರಿಶೀಲನೆ ಮಾಡಿದರು.
ಕೊತ್ತನೂರು ಪ್ರದೇಶದಲ್ಲಿ ಸಿಎಂ ಪರಿಶೀಲನೆ ನಡೆಸುತ್ತಿದ್ದಾಗ ಅಲ್ಲಿನ ನಿವಾಸಿಗಳು ಸಿಎಂ ಬೊಮ್ಮಾಯಿ ಬಳಿ ಬಂದು ತಮಗಾದ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ಅಳಲು ತೋಡಿಕೊಂಡರು. ಕಸಕಡ್ಡಿ ಚರಂಡಿಯಲ್ಲಿ ತುಂಬಿಕೊಂಡು ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸಿಎಂಗೆ ಮನವಿ ಮಾಡಿದರು.