ಬೆಂಗಳೂರು:ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ನಾಲ್ಕು ತಲೆಮಾರಿಗಾಗುವಷ್ಟು ಗಳಿಕೆ ಮಾಡಿಕೊಂಡ ನಾವು ಇಂದು ಸೋನಿಯಾ ಪರ ನಿಲ್ಲಬೇಕು ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ನಿನ್ನೆ ನೀಡಿದ್ದ ಸ್ಫೋಟಕ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಎಲ್ಲಾ ಕಾಂಗ್ರೆಸ್ ನಾಯಕರನ್ನು ಇಡಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಪಾಪ ಅವರು ಹಿರಿಯರು, ಅನುಭವಸ್ಥರು. ಅವರ ಬಗ್ಗೆ ಅಪಾರ ಗೌರವ ಇದೆ. ಸಾಮಾನ್ಯವಾಗಿ ವಸ್ತುಸ್ಥಿತಿಯನ್ನು ಮಾತಾಡುವ ಅವರು ಸತ್ಯವನ್ನೇ ಹೇಳಿದ್ದಾರೆ" ಎಂದರು.
ಇದನ್ನೂ ಓದಿ:ಗಾಂಧಿ ಕುಟುಂಬದ ಹೆಸರಲ್ಲಿ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ - ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್
ಸಚಿವ ಸುನೀಲ್ ಕುಮಾರ್ ಮಾತನಾಡಿ, "ರಮೇಶ್ ಕುಮಾರ್ ಅವರು ಸತ್ಯ ಹೇಳಿದ್ದಾರೆ. ಅವರ ಮೂಲಕ ಇಡೀ ದೇಶಕ್ಕೆ ಸತ್ಯ ಬಯಲಾಗಿದೆ. ಕಾಂಗ್ರೆಸ್ ನಾಯಕರು ಎಷ್ಟು ಆಸ್ತಿ ಮಾಡಿದ್ದಾರೆಂದು ಬಿಜೆಪಿ ಆರೋಪ ಮಾಡುವ ಅಗತ್ಯವಿಲ್ಲ. ಆ ಬಗ್ಗೆ ರಮೇಶ್ ಕುಮಾರ್ ಅವರೇ ಬಾಯ್ಬಿಟ್ಟಿದ್ದಾರೆ" ಎಂದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೂಟಿ ಹೊಡೆದಿರುವುದು ನಿಜ ಅಂತಾ ದೇಶದ ಜನತೆ ಮುಂದೆ ಒಪ್ಪಿಕೊಂಡಿದ್ದಾರೆ. ಸತ್ಯ ಒಪ್ಪಿಕೊಂಡಿರುವುದಕ್ಕೆ ಅವರಿಗೆ ಧನ್ಯವಾದಗಳು" ಎಂದರು.
ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಅಯ್ಕೆಯಾದ ದ್ರೌಪದಿ ಮುರ್ಮುರವರ ಗೆಲುವಿಗೆ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ, ಇಂದು ಪ್ರಜಾಪ್ರಭುತ್ವ ಗೆದ್ದಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯ. ಮುರ್ಮು ಆಯ್ಕೆ ಮಾಡಲು ಎಲ್ಲರೂ ಒಂದಾಗಿರುವುದಕ್ಕೆ ಕಾರಣ ಅವರ ವ್ಯಕ್ತಿತ್ವ. ಕೇವಲ ಭಾರತೀಯ ಜನತಾ ಪಾರ್ಟಿ ಮಾತ್ರವಲ್ಲ, ವಿರೋಧ ಪಕ್ಷದ ನಾಯಕರು ಸಹ ದ್ರೌಪದಿಯವರಿಗೆ ಬೆಂಬಲ ಸೂಚಿಸಿದ್ದಾರೆ. ಇದು ದ್ರೌಪದಿಯವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ನಾಯಕರು ಮುರ್ಮು ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನ್ಯಾ.ಭಕ್ತವತ್ಸಲ ಆಯೋಗದ ವರದಿ ಇಂದು ಸುಪ್ರಿಂಕೋರ್ಟ್‌ಗೆ ಸಲ್ಲಿಕೆ