ಬೆಂಗಳೂರು:ರಾಜಕಾರಣದಲ್ಲಿ ಹಾಗೆಲ್ಲ ದಿನಗಣನೆ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆರ್.ಟಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಸಂಪುಟ ಸರ್ಜರಿ ನಿರ್ಣಯ ತಿಳಿಸುತ್ತೇವೆ ಎಂಬ ಅಮಿತ್ ಶಾ ಭರವಸೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಇದೇ ವೇಳೆ ದಾವೋಸ್ ಪ್ರವಾಸದ ಬಗ್ಗೆ ಮಾತನಾಡಿದ ಸಿಎಂ, ಪ್ರವಾಸದ ಬಗ್ಗೆ ಇಂದು ತೀರ್ಮಾನ ಮಾಡುತ್ತೇನೆ. ದಾವೋಸ್ಗೆ ಇಬ್ಬರು ಸಿಎಂಗಳಿಗೆ ಆಹ್ವಾನ ಬಂದಿದೆ. ಇಬ್ಬರು ಸಿಎಂಗಳಲ್ಲಿ ನಾನೂ ಒಬ್ಬ. ಹಾಗಾಗಿ ಇದು ಬಹಳ ಮುಖ್ಯವಾದ ಕಾರ್ಯಕ್ರಮ. ರಾಜ್ಯದಲ್ಲಿ ವಿವಿಧ ಚುನಾವಣೆಗಳು ಬಂದಿವೆ. ಹೀಗಾಗಿ ಎಷ್ಟು ದಿನ ಹೋಗಬೇಕು, ಯಾವತ್ತು ಹೋಗಬೇಕು ಎಂದು ಇಂದು ಮಧ್ಯಾಹ್ನ ತೀರ್ಮಾನ ಮಾಡುತ್ತೇನೆ ಎಂದರು.