ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೊರೊನಾ ಸಂಕಷ್ಟ; 3ನೇ ಅಲೆ ತಡೆಗೆ ಈಗಿನಿಂದಲೇ ಪ್ರಯತ್ನ; ಸಿಎಂ
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದಾಗಿ ರಾಜ್ಯ ಹೆಚ್ಚು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಈ ಬಾರಿ ಮೂರನೇ ಅಲೆ ತಡೆಗೆ ಆರಂಭ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು: ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಕೊರೊನಾ ಸ್ಪೋಟದಿಂದಾಗಿ ಗಡಿ ಭಾಗದ ಮೂಲಕ ಮೊದಲ ಮತ್ತು ಎರಡನೇ ಅಲೆಯಲ್ಲಿ ರಾಜ್ಯ ಹೆಚ್ಚು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಹಾಗಾಗಿ ಮೂರನೇ ಅಲೆ ತಡೆಗೆ ಈಗಿನಿಂದಲೇ ಗಂಭೀರ ಪ್ರಯತ್ನ ಆರಂಭಿಸಿದ್ದು, ನೆರೆ ರಾಜ್ಯದ ರೈಲ್ವೆ ಪ್ರಯಾಣಿಕರನ್ನು ಆರಂಭಿಕವಾಗಿ ನಿಲ್ದಾಣಗಳಲ್ಲೇ ತಪಾಸಣೆ ಮಾಡುವಂತೆ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಹೋಗಿದ್ದೆ, ಅಲ್ಲಿನ ಕೊರೊನಾ ಸ್ಥಿತಿಗತಿ ಮತ್ತು ಮೂರನೇ ಅಲೆಗೆ ಹೇಗೆ ತಯಾರಿ ಮಾಡಬೇಕು ಎನ್ನುವ ಕುರಿತು ಸುದೀರ್ಘವಾದ ಚರ್ಚೆ ಮಾಡಿದ್ದೇನೆ. ಹಲವಾರು ಆದೇಶಗಳನ್ನು ಕೂಡ ಅಲ್ಲಿ ಕೊಟ್ಟಿದ್ದೇನೆ. ಪ್ರಮುಖವಾಗಿ ಗಡಿ ಜಿಲ್ಲೆಗೆ ಹೋಗಿ ನಾನೇ ಪರಿಶೀಲನೆ ಮಾಡಲಿದ್ದೇನೆ. ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಮೂರನೇ ಅಲೆ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮೊದಲನೆ ಅಲೆ ಮತ್ತು ಎರಡನೇ ಅಲೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬಂದಿದ್ದರಿಂದ ಅದನ್ನು ತಡೆಗಟ್ಟಲು ಈಗಿನಿಂದಲೇ ಗಂಭೀರವಾದ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಹಾಗಾಗಿ ನಾವು ಆ ದಿಕ್ಕಿನಲ್ಲಿದೆ ಕಾರ್ಯೋನ್ಮುಖವಾಗಿದ್ದೇವೆ. ಈಗಾಗಲೇ ತಜ್ಞರ ಸಮಿತಿ ನೀಡಿರುವ ಸಲಹೆಯಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೊನಾ ಹರಡುವಿಕೆ ಬೆಳವಣಿಗೆಯ ಆಧಾರದಲ್ಲಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರಿಗೆ ನೇರವಾಗಿ ಕೇರಳ ಮತ್ತು ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಬಿಗಿ ಕ್ರಮಕೈಗೊಳ್ಳಬೇಕು ಎನ್ನುವ ಕುರಿತು ರೈಲ್ವೆ ಅಧಿಕಾರಿಗಳ ಜೊತೆ ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಪ್ರಯಾಣಿಕರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕೊರೊನಾ ತಪಾಸಣೆ, ಪರೀಕ್ಷೆ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಒಂದೇ ಬಾರಿಗೆ ಸಾವಿರಾರು ಜನರು ಬಂದಾಗ ತಪಾಸಣೆ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಆರಂಭಿಕ ತಾಣಗಳಲ್ಲಿ ತಪಾಸಣೆ ಮಾಡುವುದು ಸೂಕ್ತ ಎಂದು ಬೆಂಗಳೂರಿನ ರೈಲ್ವೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈ ಕುರಿತು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.