ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿ ನಾಲ್ವರು ಗಣ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಮಿಷನ್ ದಕ್ಷಿಣ ಭಾರತದ ಭಾಗವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇಂತಹ ಗಣ್ಯರ ಆಯ್ಕೆ ಗುಣಾತ್ಮಕವಾದ ಬದಲಾವಣೆಯ ಹೊಸ ಕಲ್ಪನೆಯಾಗಿದೆ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದು ಕರ್ನಾಟಕ ಹೆಮ್ಮೆ ಪಡುವಂತಹ ವಿಷಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜನಕಲ್ಯಾಣಕ್ಕಾಗಿ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಕೆರೆಗಳ ನಿರ್ಮಾಣ, ಕೃಷಿ ಯಂತ್ರೋಪಕರಣ ಪೂರೈಕೆ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ಮದ್ಯವ್ಯಸನ ವಿರೋಧಿ ಅಭಿಯಾನ ಹೀಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಮಾಡಿರುವ ಹೆಗ್ಗಡೆ ಅವರು ಕೇವಲ ಮಾತಿನಲ್ಲಲ್ಲ, ಕೃತಿಯಲ್ಲಿಯೂ ಅವರ ಸೇವೆ ಅಮೋಘವಾದದ್ದು.
ಒಬ್ಬ ವ್ಯಕ್ತಿ ಸರ್ಕಾರಕ್ಕೆ ಸರಿಸಮಾನವಾಗಿ ಜನಪರ ಕೆಲಸ ಮಾಡುತ್ತಿರುವುದು ಒಂದು ದಾಖಲೆ. ಇವರ ಕೆಲಸಗಳು ಇತರೆ ರಾಜ್ಯಗಳಿಗೂ ಮಾದರಿಯಾಗಿದೆ. ಶ್ರೇಷ್ಠ ವ್ಯಕ್ತಿತ್ವದ ಹಿರಿಯರಿಗೆ ರಾಜ್ಯಸಭಾ ಸದಸ್ಯರ ಸ್ಥಾನ ದೊರೆತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇದರಿಂದ ರಾಜ್ಯಸಭೆಗೆ ದೊಡ್ಡ ಗೌರವ ಸಿಗಲಿದೆ. ಕರ್ನಾಟಕದ ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.