ಬೆಂಗಳೂರು :ಕೊರೊನಾ 2ನೇ ಅಲೆ ನಂತರ ಖಾಸಗಿ ಆಸ್ಪತ್ರೆ, ಲ್ಯಾಬ್ಗಳು, ಕೊರೊನಾ ನಿರ್ವಹಣೆಗೆ ಉಳಿಸಿಕೊಂಡಿದ್ದ ಎಲ್ಲ ಬಾಕಿ ಪಾವತಿಗೆ ಸೂಚಿಸಲಾಗಿದೆ. ಮಾರ್ಚ್ ತಿಂಗಳವರೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಿಗೂ ಅಗತ್ಯ ಹಣ ಬಿಡುಗಡೆಗೆ ಸೂಚಿಸಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಕಡಿಮೆಯಾದ ನಂತರ ಯಾವ ಸ್ಥಿತಿಯಿದೆ. ನವೆಂಬರ್ ತಿಂಗಳಿನಲ್ಲಿ ಏನೆಲ್ಲಾ ಆಗಿದೆ. ಕ್ಲಸ್ಟರ್ಗಳ ಸೃಷ್ಟಿಗೆ ಕಾರಣವೇನು? ಎಷ್ಟು ಜಿಲ್ಲೆಗಳಲ್ಲಿ ಕ್ಲಸ್ಟರ್ ಬಂದಿದೆ. ಅವುಗಳ ನಿರ್ವಹಣೆ ಯಾವ ರೀತಿ ಇದೆ ಎಂಬುದನ್ನು ಚರ್ಚಿಸಲಾಗುವುದು ಎಂದರು.
ಅಲ್ಲದೇ, ಹೊಸ ಪ್ರಬೇಧ ಒಮಿಕ್ರಾನ್ ಬಂದ ನಂತರ ಅದರ ಪರಿಣಾಮ ಏನಾಗಿದೆ? ಅವರ ಸಂಪರ್ಕಿತರ ವಿವರಗಳ ಜೊತೆಗೆ ಬೇರೆ ಬೇರೆ ದೇಶದಲ್ಲಿ ಹೊಸ ತಳಿ ಒಮಿಕ್ರಾನ್ ಬಗ್ಗೆ ಪ್ರೋಟೋಕಾಲ್ ಏನಿದೆ? ಚಿಕಿತ್ಸೆ ಯಾವ ರೀತಿ ಇದೆ. ನಾವು ಎಲ್ಲ ಸಿದ್ಧತೆ ಯಾವ ರೀತಿ ಮಾಡಿಕೊಳ್ಳಬೇಕು ಎಂದು ಸಂಪೂರ್ಣವಾದ ವಿವರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ನಾಳೆ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಿ ಕೆಲ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.