ಬೆಂಗಳೂರು :ಕನ್ನಡಿಗರು ಮಾತ್ರವಲ್ಲ ಸುತ್ತಮುತ್ತಲ ರಾಜ್ಯಗಳ ಜನರು ಕೂಡ ಬಂದು ಹೋಗುವ ರೀತಿ ಅಂಬರೀಶ್ ಸ್ಮಾರಕವನ್ನು ನಿರ್ಮಾಣ ಮಾಡಲಿದ್ದೇವೆ. ಆದಷ್ಟು ಬೇಗ ಪುನೀತ್ ರಾಜ್ಕುಮಾರ್ ಅವರ ಸ್ಮಾರಕವನ್ನೂ ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ.ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಸಿಎಂ, ಅಂಬರೀಶ್ರ ಸ್ಮಾರಕ ನಿರ್ಮಾಣವಾಗಬೇಕು ಎಂಬುದು ಎಲ್ಲರ ಅಭಿಲಾಷೆ. ಪುನೀತ್ ರಾಜಕುಮಾರ್ ಅವರ ಸ್ಮಾರಕವನ್ನೂ ಶೀಘ್ರದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಮಾಡಲಿದ್ದೇವೆ. ಪುನೀತ್ಗೆ ಕರ್ನಾಟಕ ರತ್ನವನ್ನು ನೀಡುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.
ಅಂಬರೀಶ್ ಜೊತೆಗಿನ ನಮ್ಮ ಸ್ನೇಹ 40 ವರ್ಷಕ್ಕೂ ಹಳೆಯದು. ಅಂಬರೀಶ್ ಅವರು ತೆರೆದ ಪುಸ್ತಕದಂತೆ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಬದುಕು ನಡೆಸುತ್ತಾರೋ ಅವರದ್ದು ಮಾತ್ರವೇ ಸಾರ್ಥಕತೆಯ ಬದುಕಾಗುತ್ತದೆ ಎಂದರು.