ಕರ್ನಾಟಕ

karnataka

ETV Bharat / city

SC,ST ಸಮುದಾಯಕ್ಕೆ 2ರಷ್ಟು ಭೂಮಿ ನೀಡಬೇಕೆಂಬುದು ನಮ್ಮ ಸಂಕಲ್ಪ: ಸಿಎಂ ಬೊಮ್ಮಾಯಿ - CM Basavaraj bommai

ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ವಾಲ್ಮೀಕಿ. ಒಂದು ಮಹತ್ವದ ಮೂಲಭೂತ ಬದಲಾವಣೆ ದೇಶ, ಸೈನ್ಯ ಒಂದು ಸಮುದಾಯದಿಂದ ಆಗಿಲ್ಲ. ಆದರೆ, ಕೆಲ ವ್ಯಕ್ತಿಗಳಿಂದ ಆಗಿದೆ. ಇಂತಹ ವ್ಯಕ್ತಿತ್ವಗಳಿಂದ ದೇಶದಲ್ಲಿ ಮಹತ್ವದ ಮೂಲಭೂತ ಬದಲಾವಣೆ ಆಗಿವೆ. ಈ ಭೂಮಿಯ ಮೇಲೆ ಸೂರ್ಯ ಚಂದ್ರ ಇರುವವರೆಗೂ ಮಹರ್ಷಿ ವಾಲ್ಮೀಕಿಯವರ ಕೃತಿ ಹಾಗೂ ಜೀವನ ಕ್ರಮ ಜೀವಂತವಾಗಿ ಉಳಿಯಲಿದೆ..

CM Basavaraj bommai inaugurates valmiki jayanti program
ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

By

Published : Oct 20, 2021, 2:54 PM IST

ಬೆಂಗಳೂರು :ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಈಗ ನೀಡುವುದಕ್ಕಿಂತ ಎರಡರಷ್ಟು ಭೂಮಿ ನೀಡುವುದು ನನ್ನ ಸರ್ಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

7,600 ಕೋಟಿ ರೂ. ಅನ್ನು ಈ ಸಮುದಾಯದ ಕಲ್ಯಾಣಕ್ಕೆ ನೀಡಲಾಗಿದೆ. ಎಷ್ಟು ಹಣ ನೀಡಲಾಗಿದೆ ಎನ್ನುವುದಕ್ಕಿಂತ ಇದನ್ನು ಹೇಗೆ? ಬಳಕೆ ಮಾಡಲಾಗಿದೆ ಎನ್ನುವುದು ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಭೂ ಒಡೆತನ ನೀಡಬೇಕೆನ್ನುವುದು ಸರ್ಕಾರದ ಆಶಯವಾಗಿದೆ.

ಹಾಗಾಗಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ವಿಚಾರವಾಗಿ ಸೂಚನೆ ನೀಡಿದ್ದೇನೆ. ಇದರಿಂದ ಮಾತ್ರ ಸಮುದಾಯವನ್ನು ಮುಂದಿನ ಜನಾಂಗಕ್ಕೆ ಮುಂಚೂಣಿಯಲ್ಲಿ ಕರೆದೊಯ್ಯಲು ಸಾಧ್ಯ ಎಂಬುದನ್ನು ನಾನು ನಂಬಿದ್ದೇನೆ ಎಂದರು.

ಈ ಎರಡು ಸಮುದಾಯದ ಹೆಣ್ಣು ಮಕ್ಕಳಿಗೆ ಸಿಗಬೇಕಾದ ನಿಜವಾದ ಪ್ರೋತ್ಸಾಹ ಇನ್ನು ಸಿಕ್ಕಿಲ್ಲ ಎನ್ನುವುದು ನನ್ನ ಭಾವನೆ. ಇವರನ್ನ ಆರ್ಥಿಕವಾಗಿ ಸಬಲರನ್ನಾಗಿಸುವ ವೃತ್ತಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ, ಸಹಕಾರ ನೀಡಬೇಕು. ಈ ಸಮುದಾಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾದರೆ ಸಮಾಜದಲ್ಲಿ ಪರಿವರ್ತನೆಯಾಗಲಿದೆ. ಈ ನಿಟ್ಟಿನಲ್ಲಿ ನನ್ನ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಿಎಂ ಭರವಸೆ ನೀಡಿದರು.

ಅರಿವಿನ ಅರಿವು ಮೂಡಿಸಿದರು
ಮಹರ್ಷಿ ವಾಲ್ಮೀಕಿ ಜಯಂತಿ ಒಂದು ಅರ್ಥಪೂರ್ಣ ಆಚರಣೆ. ವಾಲ್ಮೀಕಿ ಅಂದರೆ ಜಾಗೃತಿ. ಅರಿವಿನ ಬಗ್ಗೆ ಅರಿವು ಮೂಡಿಸಿದ ಅವರನ್ನು ನೆನೆದಾಗ ಸಮಾಜದಲ್ಲಿ ಪರಿವರ್ತನೆ ಮೂಡುತ್ತದೆ. ಮನುಷ್ಯನ ಮನಸ್ಸಿನಲ್ಲಿ ಉಂಟಾಗುವ ಬದಲಾವಣೆ ಆತನ ಅಕ್ಕಪಕ್ಕದ ಪರಿಸರ, ಸಮಾಜ ಮತ್ತು ಮುಂಬರುವ ದಿನಗಳಲ್ಲಿ ಸಮುದಾಯ ಮತ್ತು ರಾಜ್ಯದಲ್ಲಿ ಮಹತ್ವದ ಬದಲಾವಣೆ ಉಂಟಾಗುತ್ತದೆ.

ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ವಾಲ್ಮೀಕಿ. ಒಂದು ಮಹತ್ವದ ಮೂಲಭೂತ ಬದಲಾವಣೆ ದೇಶ, ಸೈನ್ಯ ಒಂದು ಸಮುದಾಯದಿಂದ ಆಗಿಲ್ಲ. ಆದರೆ, ಕೆಲ ವ್ಯಕ್ತಿಗಳಿಂದ ಆಗಿದೆ. ಇಂತಹ ವ್ಯಕ್ತಿತ್ವಗಳಿಂದ ದೇಶದಲ್ಲಿ ಮಹತ್ವದ ಮೂಲಭೂತ ಬದಲಾವಣೆ ಆಗಿವೆ. ಈ ಭೂಮಿಯ ಮೇಲೆ ಸೂರ್ಯ ಚಂದ್ರ ಇರುವವರೆಗೂ ಮಹರ್ಷಿ ವಾಲ್ಮೀಕಿಯವರ ಕೃತಿ ಹಾಗೂ ಜೀವನ ಕ್ರಮ ಜೀವಂತವಾಗಿ ಉಳಿಯಲಿದೆ ಎಂದರು.

'ರಾಮಾಯಣ' ಒಂದು ಅದ್ಭುತ ಕಾವ್ಯ ರಚನೆ. ಒಂದು ಮೌಲ್ಯವನ್ನು ಇದು ಹೇಳುತ್ತದೆ. ಒಬ್ಬ ಪರಿಪೂರ್ಣ ವ್ಯಕ್ತಿ ರಾಜ್ಯವನ್ನು ಆಳಿದಾಗ ಮಾತ್ರ ಅದು ರಾಮರಾಜ್ಯ ಎಂದು ಕರೆಸಿಕೊಳ್ಳುತ್ತದೆ. ಉತ್ತಮ ರಾಜ್ಯಭಾರ ಆಡಳಿತಕ್ಕೆ ಶ್ರೀರಾಮಚಂದ್ರ ಮಾದರಿಯಾಗಿದ್ದ. ಸೋದರತ್ವ, ಪತಿ-ಪತ್ನಿ, ಗುರು-ಶಿಷ್ಯ ಸಂಬಂಧಗಳು ಸೇರಿದಂತೆ ವಿಶ್ವಕ್ಕೆ ಸಂಸ್ಕೃತಿಯನ್ನು ನೀಡಿದ ಏಕೈಕ ಕವಿ ಮಹರ್ಷಿ ವಾಲ್ಮೀಕಿ. ಅದೇ ಸಂಸ್ಕೃತಿಯಲ್ಲಿ ನಾವು ಬದುಕಿದ್ದೇವೆ ಹಾಗೂ ಮುಂದೆ ಬದುಕಿ ಬಾಳಬೇಕಾಗುತ್ತದೆ. ಸಾವಿನ ನಂತರವೂ ಬದುಕಿದ ಮಹಾನ್ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದರು.

ಪ್ರತ್ಯೇಕ ಸಚಿವಾಲಯ
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಅಧರ್ಮವನ್ನು ಅಳಿಸಿ ಧರ್ಮವನ್ನು ಉಳಿಸುವ ಮಹತ್ವದ ಉದ್ದೇಶದಿಂದ ವಾಲ್ಮೀಕಿಯವರು ರಾಮಾಯಣ ರಚಿಸಿದರು. ಸಮಾಜದಲ್ಲಿ ಸುಧಾರಣೆ ತರುವ ಅನೇಕ ವಿಚಾರವನ್ನು ರಾಮಾಯಣದಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತ್ಯೇಕ ಸಚಿವಾಲಯ ಆಗಬೇಕೆಂಬ ದೊಡ್ಡ ಬೇಡಿಕೆ ಸಮುದಾಯದವರಿಂದ ಇತ್ತು. ಇದಾದ ಬಳಿಕ ಮೊದಲ ಬಾರಿಗೆ ನಾಯಕನಾಗಿ ಆಯ್ಕೆಯಾಗಿದ್ದು, ಹೆಮ್ಮೆ ತಂದಿದೆ. ಪ್ರತ್ಯೇಕ ಸಚಿವಾಲಯದ ಬೇಡಿಕೆ ಈಡೇರಿರುವುದು ಸಂತಸ ತಂದಿದೆ ಎಂದರು.

ದೇಶದ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದರು. ಇದೀಗ ರಾಜ್ಯದಲ್ಲಿ ಇಂಥದೊಂದು ಮಹತ್ವದ ಕಾರ್ಯವಾಗಿದೆ. ಈ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ ಎಂದರು.

ಬುಡಕಟ್ಟು ಸಮುದಾಯದವರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಬೇಕು ಎಂಬ ಉದ್ದೇಶದಿಂದ ಆನ್ಲೈನ್ ವೇದಿಕೆಗಳ ಮೂಲಕ ವ್ಯಾಪಾರ, ವಹಿವಾಟು ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಮುದಾಯದಲ್ಲಿ ಇದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸಹ ನಾವು ಗೌರವಿಸಿದ್ದೇವೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿಯನ್ನು ಆರಂಭಿಸಿದ್ದರು. ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಸಹಕಾರ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ.

ಬಜೆಟ್​​​ನಲ್ಲಿ ಸಹ ನಮಗೆ ಉತ್ತಮ ಅನುದಾನ ಲಭಿಸಿದೆ. ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ಒದಗಿಸುವ ಕಾರ್ಯವನ್ನು ಈ ಸರ್ಕಾರ ಮಾಡಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ನಗರದ ಬನಶಂಕರಿ 6ನೇ ಹಂತದಲ್ಲಿ 9.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಹರ್ಷಿ ವಾಲ್ಮೀಕಿ ಭವನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ಜತೆಗೆ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಂಡಿರುವ ಪ್ರೋತ್ಸಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಶಾಸಕ ಶಾಂತಾರಾಮ್ ಸಿದ್ದಿ, ಅಧಿಕಾರಿ ನಾಗಲಾಂಬಿಕಾದೇವಿ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details