ಕರ್ನಾಟಕ

karnataka

By

Published : Apr 25, 2022, 8:53 AM IST

ETV Bharat / city

ಡಾ.ರಾಜ್​​ಕುಮಾರ್ ಭಾರತೀಯ ಚಿತ್ರರಂಗದ ಅತ್ಯಂತ ಶ್ರೇಷ್ಠ ಶೋಮ್ಯಾನ್: ಸಿಎಂ ಬೊಮ್ಮಾಯಿ

ಮಗುವಿನ ಮುಗ್ಧತೆಯನ್ನು ಜೀವನಪರ್ಯಂತ ಉಳಿಸಿಕೊಂಡು, ಸಮಚಿತ್ತತೆ ಹಾಗೂ ಸ್ಥಿತಪ್ರಜ್ಞತೆ ಕಾಯ್ದುಕೊಳ್ಳುತ್ತಿದ್ದ ಡಾ.ರಾಜ್​​ಕುಮಾರ್ ಅವರ ಸಾಧನೆ ದೊಡ್ಡದು. ಕನ್ನಡದ ಮಣ್ಣಿನಲ್ಲಿ ಹುಟ್ಟಿ ಸಾಧನೆ ಮಾಡಿ ನಮೆಗೆಲ್ಲರಿಗೂ ಆದರ್ಶವಾಗಿರುವುದು ನಮ್ಮ ಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

State Film Award program
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು :ಮಗುವಿನ ಮುಗ್ಧತೆಯನ್ನು ಜೀವನ ಪರ್ಯಂತ ಉಳಿಸಿಕೊಂಡು, ಸಮಚಿತ್ತತೆ ಹಾಗೂ ಸ್ಥಿತಪ್ರಜ್ಞತೆ ಕಾಯ್ದುಕೊಳ್ಳುತ್ತಿದ್ದ ಡಾ.ರಾಜ್​​ಕುಮಾರ್ ಅವರ ಸಾಧನೆ ದೊಡ್ಡದು. ಕನ್ನಡದ ಮಣ್ಣಿನಲ್ಲಿ ಹುಟ್ಟಿ ಸಾಧನೆ ಮಾಡಿ ನಮಗೆಲ್ಲರಿಗೂ ಆದರ್ಶವಾಗಿರುವುದು ನಮ್ಮ ಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಾ.ರಾಜ್ ಕುಮಾರ್ 94ನೇ ಹುಟ್ಟುಹಬ್ಬ ಹಿನ್ನೆಲೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮಾತನಾಡಿದ ಅವರು, ವರನಟ ಡಾ. ರಾಜ್​​ಕುಮಾರ್ ಜತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡರು.

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಮಾತನಾಡಿರುವುದು..

ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್​​ಕುಮಾರ್ ಅತ್ಯಂತ ಶ್ರೇಷ್ಠ ಶೋಮ್ಯಾನ್ ಆಗಿದ್ದರು. ಅವರ ಸಹಜತೆಯೇ ಅವರ ಪ್ರತಿಭೆಯಾಗಿತ್ತು. ಅದ್ಭುತ ನಟನಾ ಕೌಶಲ್ಯದಿಂದ ತನ್ನದೇ ಆದ ಚಾಪನ್ನು ಮೂಡಿಸಿದ ಡಾ.ರಾಜ್​​ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು.

ಡಾ. ರಾಜ್​​ಕುಮಾರ್ ಒಂದು ದಂತಕಥೆ :ನನಗೆ ಬಹಳ ಆಯಾಸವಾದಾಗ ಡಾ.ರಾಜ್ ಅವರ ಹಾಡುಗಳನ್ನು ಕೇಳಿ ಸಂತೃಪ್ತಿ ಕಂಡಿದ್ದೇನೆ. ಅವರು 'ಒಂದು ದಂತಕಥೆ'. ನಮ್ಮನ್ನು ಬಿಟ್ಟುಹೋಗಿಲ್ಲ. ಅವರು ಕಥೆಗಾರರಿಗೆ ಪ್ರೇರಣೆಯಾಗಿದ್ದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ.

ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಎಂಬ ಮಾತಿಗೆ ಪಾರ್ವತಮ್ಮನವರು ಅನ್ವರ್ಥವಾಗಿದ್ದರು. ಡಾ.ರಾಜ್​​ಕುಮಾರ್ ಆ ಮಟ್ಟಕ್ಕೆ ಬೆಳೆಯಲು ಪಾರ್ವತಮ್ಮ ರಾಜ್​​ಕುಮಾರ್ ಮಹತ್ವದ ಪಾತ್ರವಹಿಸಿದ್ದರು ಎಂದರು. ನಾನು ಹೈಸ್ಕೂಲ್ ಹುಡುಗನಾಗಿದ್ದಾಗ ಡಾ.ರಾಜ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಮೊದಲ ಬಾರಿ ಕಂಡಿದ್ದು.

ಅವರ ಜತೆ ಅಭಿನಯಿಸಿದ ಬಹಳಷ್ಟು ನಟರನ್ನು, ಸಹಕಲಾವಿದರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಯಾರ ಮನಸ್ಸನ್ನೂ ನೋಯಿಸದ ಡಾ.ರಾಜ್​​ಕುಮಾರ್ ಅವರು ವೀರಪ್ಪನ್‌ನವರೊಂದಿಗೆ ಕಾಡಿನಲ್ಲಿದ್ದು ಬಂದ ಮೇಲೆ ಒಮ್ಮೆ ಭೇಟಿಯಾಗಿ, ವೀರಪ್ಪನ್ ಬಗ್ಗೆ ಕೇಳಿದಾಗ ಒಂದು ಶಬ್ಧವನ್ನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ ಎಂದು ಸಿಎಂ ಸ್ಮರಿಸಿದರು.

ಮೈಸೂರಿನಲ್ಲಿ ಚಿತ್ರನಗರಿ ಆರಂಭ : ಡಾ.ಪುನೀತ್ ರಾಜ್​​ಕುಮಾರ್ ಅವರು ತನ್ನ ತಂದೆಯ ಸೂಕ್ಷ್ಮತೆಯನ್ನು ಅಳವಡಿಸಿಕೊಂಡಿದ್ದರು. ಪುನೀತ್ ಅವರಿಗೆ ಅಭಿಮಾನಿಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ. ಸಣ್ಣ ವಯಸ್ಸಿನಲ್ಲಿ ಮಾಡಿರುವ ಸಾಧನೆಯಿಂದ ಅವರು ಚಿರಸ್ಥಾಯಿಯಾಗಿದ್ದಾರೆ. ಕರ್ನಾಟಕ ರತ್ನನ ಪುತ್ರನಿಗೆ ಕರ್ನಾಟಕ ರತ್ನ ನೀಡುವ ಸೌಭಾಗ್ಯ ನಮ್ಮ ಸರ್ಕಾರದ್ದು.

ಡಾ.ಪುನೀತ್ ರಾಜ್​​ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡುವ ಸಮಾರಂಭ ಸದ್ಯದಲ್ಲಿಯೇ ಆಯೋಜಿಸಲಾಗುವುದು. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾಗಳನ್ನ ಮಾಡಲಿ, ಮೈಸೂರಿನಲ್ಲಿ ಚಿತ್ರನಗರಿ ಇದೇ ವರ್ಷ ಆರಂಭವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

5 ವರ್ಷಗಳ ಬಳಿಕ ರಾಜ್ಯ ಪ್ರಶಸ್ತಿ ಪಡೆದ ಸ್ಯಾಂಡಲ್​​ವುಡ್ ಸ್ಟಾರ್ಸ್ : ಕನ್ನಡ ಚಿತ್ರರಂಗದ ನಟಸಾರ್ವಭೌಮ, ಕನ್ನಡಿಗರ ಆರಾಧ್ಯದೈವ ಡಾ.ರಾಜ್​​ಕುಮಾರ್ ಅವರ 94ನೇ ಹುಟ್ಟು ಹಬ್ಬವನ್ನ ನಿನ್ನೆ (ಭಾನುವಾರ) ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಅವರು ಜನ್ಮದಿನದ ಅಂಗವಾಗಿ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಕನ್ನಡ ಚಿತ್ರರಂಗದಲ್ಲಿ ಕಳೆದ ಐದು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ಈ ವರ್ಷ ರಾಜ್ಯ ಸರ್ಕಾರದಿಂದ 2017ನೇ ಸಾಲಿನ ಪ್ರಶಸ್ತಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು.

5 ವರ್ಷಗಳ ಬಳಿಕ ರಾಜ್ಯ ಪ್ರಶಸ್ತಿ ಪಡೆದ ಸ್ಯಾಂಡಲ್​​ವುಡ್ ಸ್ಟಾರ್ಸ್..

ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ತಂದೆ ಬಗ್ಗೆ ಗೊತ್ತಿಲ್ಲದ ಹಲವಾರು ವಿಚಾರಗಳನ್ನ ಬಿಚ್ಚಿಟ್ಟರು‌. ಅಪ್ಪಾಜಿ ಬಗ್ಗೆ ನಮಗಿಂತ ಅಭಿಮಾನಿಗಳು ಗೊತ್ತು. ಅಪ್ಪಾಜಿ ಬಗ್ಗೆ ಆತ್ಮ ಚರಿತ್ರೆ ಬರೆಯಬೇಕು ಅಂತಾ ಕೇಳಿದರು. ಅದಕ್ಕೆ ಅಣ್ಣಾವ್ರು ನನ್ನ ಆತ್ಮ ಚರಿತ್ರೆ ಬರೆಯಿಸಬೇಕು ಎಂಬ ಅಗತ್ಯ ಇಲ್ಲ ಎಂದು ಹೇಳಿದರು.

ಈ ಮಾತಿಗೆ ಪೂರಕವಾಗಿ ಅಣ್ಣಾವ್ರು ರಾಮಾಯಣ ಬಗ್ಗೆ ಒಂದು ಸಣ್ಣ ಕಥೆ ಹೇಳಿದರು. ಹೃದಯ ಎಂಬುದು ರಾಮ, ಬುದ್ದಿ ಎಂಬುದು ರಾವಣ. ನಿನ್ನ ಹೃದಯಕ್ಕೆ ತಲೆಗೂ ಇರುವ ದೂರ. ಇದನ್ನ ಅರ್ಥ ಮಾಡಿಕೊಂಡರೆ ಸಾಕು ಎಂದಿದ್ದರು. ಇನ್ನು ರಾಜ್​​ಕುಮಾರ್ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಕೊನೆಯವರೆಗೂ ಒಂದು ಬಿಳಿ ಶಾರ್ಟ್ ಮತ್ತು ಒಂದು ಬಿಳಿ ಪಂಚೆಯಲ್ಲಿ ಉಳಿದರು ಎಂದರು.

ಅಪ್ಪಾಜಿ ಸಿನಿಮಾ ಬರೋದಕ್ಕಿಂತ ಮುಂಚೆ, ನಾಟಕಗಳಲ್ಲಿ ಡೈಲಾಗ್ ಹೇಳಿ ಕೊಡುವ ಕೆಲಸ ಮಾಡುತ್ತಿದ್ದರು. ಕಲಾವಿದನಿಗೆ ಎರಡು ಚೆನ್ನಾಗಿ ಇರುಬೇಕು. ಒಂದು ಮೈಕಟ್ಟು ಹಾಗೂ ನುಡಿ. ನಮ್ಮ ತಾತ ಹೇಳಿದ ಹಾಗೇ ನಮ್ಮ ಅಪ್ಪಾಜಿ ಕೊನೆವರೆಗೂ ಮುತ್ತುರಾಜನಾಗಿ ಉಳಿದವರು. ಕೊನೆಗೆ ನನ್ನ ತಮ್ಮ ಅಪ್ಪಾಜಿ ಬಗ್ಗೆ ಆತ್ಮ ಚರಿತ್ರೆ ಬರೆದ. ನಾನು ಮಗನಾಗಿ ಅಲ್ಲಾ ಅಭಿಮಾನಿಯಾಗಿ. ಎಷ್ಟೇ ಅವಾರ್ಡ್ ಬಂದರು ನನಗೆ ಬಂದಿಲ್ಲ ಎಂಬ ರೀತಿಯಲ್ಲಿ ಇರಬೇಕು ಎಂಬುವುದು ನಮ್ಮ ಅಪ್ಪಾಜಿಯ ಮಾತು ಎಂದರು.

ಹಿರಿಯ ನಟಿ ಲಕ್ಷ್ಮಿಗೆ ಡಾ.ರಾಜಕುಮಾರ್ ಪ್ರಶಸ್ತಿ:ರಾಜ್​​ಕುಮಾರ್​​ ಹುಟ್ಟುಹಬ್ಬ ಹಿನ್ನೆಲೆ 2017ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು. ಜೀವಮಾನದ ಶ್ರೇಷ್ಠ ಸಾಧನೆಗಾಗಿ, ಹಿರಿಯ ಬಹುಭಾಷೆ ನಟಿ ಲಕ್ಷ್ಮಿ ಅವರಿಗೆ ಡಾ.ರಾಜ್​​ಕುಮಾರ್ ಪ್ರಶಸ್ತಿ ಹಾಗೂ 5 ಲಕ್ಷ ರೂ. ನಗದು 50 ಗ್ರಾ ಚಿನ್ನದ ಪದಕ ನೀಡಲಾಯಿತು. ಬಳಿಕ ಮಾತನಾಡಿದ ಲಕ್ಷ್ಮಿ, ಅದೃಷ್ಟ ಇದ್ದರೆ ಮಾತ್ರ ಸಿನಿಮಾಗೆ ಬರಬೇಕು. ಪುಣ್ಯ ಮಾಡಿದ್ರೆ ಮಾತ್ರ ರಾಜ್​​ಕುಮಾರ್ ಅವರೊಂದಿಗೆ ಸಿನಿಮಾ ಮಾಡುವ ಅದೃಷ್ಟ ಸಿಗುತ್ತದೆ ಎಂದರು.

ಎಸ್.ನಾರಾಯಣ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಇನ್ನು ಜೀವಮಾನ ಸಾಧನೆಗಾಗಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನ ಎಸ್.ನಾರಾಯಣ್ ಅವರಿಗೆ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಎಸ್. ನಾರಾಯಣ್, ಪುಟ್ಟಣ್ಣ ಅವರ ಹತ್ತಿರ ಕೆಲಸ ಕಲಿಯಲು ಹೋದೆ, ನನ್ನ ಅಂಗಡಿ ಬಾಗಿಲು ಹಾಕಿದೆ. ಬೇರೆಯವರು ಹತ್ತಿರ ಕೆಲಸ ಕಲಿ ಅಂತಾ ಹೇಳಿದರು. ಆದರೆ, ಅವರ ಜತೆ ಕೆಲಸ ಮಾಡಲು ಆಗಲಿಲ್ಲ. ಈಗ ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್, ಹಿರಿಯ ನಟಿ ಲಕ್ಷ್ಮಿ, ನಟಿ ತಾರಾ ಅನುರಾಧ, ಫಿಲ್ಮ್ಸ್ ಛೇಂಬರ್ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷರುಗಾಳದ ಸಾ ರಾ ಗೋವಿಂದ, ಚಿನ್ನೇಗೌಡ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಪಿ.ಎಸ್ ಹರ್ಷ ಮತ್ತು‌ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಚಿತ್ರರಂಗದ ತಾರೆಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞನರು ಭಾಗಿಯಾಗಿದ್ದರು.

For All Latest Updates

TAGGED:

ABOUT THE AUTHOR

...view details