ಬೆಂಗಳೂರು:ಕೋವಿಡ್ ಹಾಗೂ ಲಾಕ್ಡೌನ್ನಿಂದ ರಾಜ್ಯದ ಬೊಕ್ಕಸ ಭಾಗಶಃ ಖಾಲಿಯಾಗಿದೆ. ಕೋವಿಡ್ ಸಂಕಷ್ಟದ ನಡುವೆ ಸದ್ಯಕ್ಕೆ ಸಂಪೂರ್ಣ ಆರ್ಥಿಕತೆ ಚೇತರಿಕೆ ಅಸಾಧ್ಯ. ಇದನ್ನು ಮನಗಂಡ ನೂತನ ಮುಖ್ಯಮಂತ್ರಿ, ವೆಚ್ಚ ಕಡಿತ ಹಾಗೂ ಬದ್ಧ ವೆಚ್ಚ ಕಡಿತಕ್ಕೆ ಮುಂದಾಗಿದ್ದಾರೆ.
ಕೋವಿಡ್ ಹಾಗೂ ಲಾಕ್ಡೌನ್ನಿಂದ ರಾಜ್ಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಇದರ ಪ್ರಹಾರಕ್ಕೆ ರಾಜ್ಯ ಸರ್ಕಾರ ಆದಾಯವಿಲ್ಲದೆ ಮಂಡಿಯೂರುವ ಪರಿಸ್ಥಿತಿ ಎದುರಾಗಿದೆ. ಇತ್ತ ಕೋವಿಡ್ 3ನೇ ಅಲೆಯ ಭೀತಿ ಎದುರಾಗಿದ್ದು, ಸಂಪೂರ್ಣ ಅನ್ಲಾಕ್ ಕನಿಷ್ಠ ಡಿಸೆಂಬರ್ವರೆಗೆ ಅನುಮಾನವಾಗಿದೆ.
ಹೀಗಾಗಿ ರಾಜ್ಯದ ಬೊಕ್ಕಸ ತುಂಬುವ ಲಕ್ಷಣ ಕಾಣುತ್ತಿಲ್ಲ. ಇತ್ತ ಸರ್ಕಾರ ಹಣಕಾಸು ನಿರ್ವಹಣೆಗಾಗಿ ಸಾಲದ ಮೊರೆ ಹೋಗಿದೆ. ಇದರ ಜತೆಗೆ ವೆಚ್ಚ ಕಡಿತದ ಅನಿವಾರ್ಯವೂ ಸರ್ಕಾರದ ಮುಂದಿದೆ. ಇದಕ್ಕಾಗಿಯೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ವೆಚ್ಚ ಕಡಿತಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ವೆಚ್ಚ ಕಡಿತದ ಜತೆಗೆ ಬದ್ಧ ವೆಚ್ಚಕ್ಕೂ ಅಂಕುಶ ಹಾಕಲು ಮುಂದಾಗಿದ್ದಾರೆ. ಆ ಮೂಲಕ ಆದಾಯ ಕೊರತೆ ಹೊರೆ ತಗ್ಗಿಸುವುದನ್ನು ಗಂಭೀರವಾಗಿ ಪರಿಗಣಿಸಿದೆ.
ಏನಿದು ಬದ್ಧ ವೆಚ್ಚದ ಹೊರೆ?:
ಸರ್ಕಾರಿ ನೌಕರರಿಗೆ ನೀಡುವ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ನಿವೃತ್ತಿ ವೇತನ, ದಿನಗೂಲಿ ನೌಕರರ ವೇತನ, ಗುತ್ತಿಗೆ ನೌಕರರಿಗೆ ನೀಡುವ ವೇತನ, ರಾಜ್ಯ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿ, ಆಡಳಿತಾತ್ಮಕ ವೆಚ್ಚ, ಸಹಾಯಧನವನ್ನು ಬದ್ಧ ವೆಚ್ಚ ಎಂದು ಕರೆಯಲಾಗುತ್ತದೆ.
ಹಲವು ವರ್ಷಗಳಿಂದ ಆಯವ್ಯಯದ ಗಾತ್ರ ಏರಿಕೆ ಕಾಣುತ್ತಿದ್ದರೂ, ಅದರಲ್ಲಿನ ಗಣನೀಯ ಪ್ರಮಾಣ ಬದ್ಧ ವೆಚ್ಚಕ್ಕೆ ಹೋಗುತ್ತದೆ. ಬಜೆಟ್ ಗಾತ್ರದಲ್ಲಿ ಸುಮಾರು 75-80% ಬದ್ಧ ವೆಚ್ಚಕ್ಕೆ ಖರ್ಚಾಗುತ್ತದೆ. ಅದರಲ್ಲಿಯೂ 2021-22 ಸಾಲಿನಲ್ಲಿ ಈ ಬದ್ಧ ವೆಚ್ಚ ಇನ್ನಷ್ಟು ಏರಿಕೆಯಾಗಿದೆ. 2020-21 ಸಾಲಿಗೆ ಹೋಲಿಸಿದರೆ 2021-22ರಲ್ಲಿ ಬದ್ಧ ವೆಚ್ಚ 8,210 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019-20ರಲ್ಲಿ ಬದ್ಧ ವೆಚ್ಚ 1,74,257 ಕೋಟಿ ರೂ. ಆಗಿದ್ದರೆ, 2020-21ರಲ್ಲಿ ಅದು 1,79,195 ಕೋಟಿ ರೂ.ಗೆ ಏರಿಕೆಯಾಗಿದೆ. 2021-22 ಸಾಲಿನ 1,87,405 ಕೋಟಿ ರೂ.ಗೆ ಏರಿಕೆಯಾಗಿದೆ. ಆ ಮೂಲಕ ಈ ಬಾರಿ ಬಜೆಟ್ ಗಾತ್ರದ 76.11% ಬದ್ಧ ವೆಚ್ಚಕ್ಕೆ ತಗುಲುತ್ತಿದೆ. ಉಳಿದ ಹಣ ಮಾತ್ರ ಅಭಿವೃದ್ಧಿ ಯೋಜನೆಗಳಿಗೆ ಲಭ್ಯವಾಗುತ್ತಿದೆ.