ಬೆಂಗಳೂರು: ಇಂದು ನಾಡಿನಾದ್ಯಂತ 2022ರ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ನಾಡಿನ ಸಮಸ್ತ ಜನತೆಗೆ 2022ರ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು. ನವ ವರ್ಷ ಎಲ್ಲರಿಗೂ ಸುಖ - ಸಂತಸಗಳನ್ನು ಹೊತ್ತು ತರಲಿ. ಜನರ ಆರೋಗ್ಯದ ದೃಷ್ಟಿಯಿಂದ ಬಹಿರಂಗ ಸಂಭ್ರಮಾಚರಣೆಗಳಿಂದ ದೂರವಿದ್ದು, ಸಾಂಕ್ರಾಮಿಕದ ಸವಾಲುಗಳನ್ನು ನಾವೆಲ್ಲರೂ ಕೂಡಿ ಎದುರಿಸೋಣ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಕೊರೊನಾ ಮಣಿಸೋಣ ಎಂದಿದ್ದಾರೆ.
ಹೊಸ ಭರವಸೆಯೊಂದಿಗೆ ನೂತನ ವರ್ಷ ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ ಎಂದು ಸಿಎಂ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು. ಹೊಸ ವರ್ಷವು ನವಚೈತನ್ಯ, ನವೋತ್ಸಾಹಗಳನ್ನು ಹೊತ್ತು ತರಲಿ. ಕಳೆದು ಹೋದ ದಿನಗಳ ನೋವು ಮರೆತು, ಹೊಸ ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಾಂಕ್ರಾಮಿಕದ ಸಂಕಷ್ಟಗಳನ್ನು ಗೆದ್ದು, ಸುಖ, ಸಂತೋಷ, ಯಶಸ್ಸುಗಳ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟೋಣ. ಎಲ್ಲರ ಕನಸುಗಳು ಈಡೇರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಮೂಲಕ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ದೇಶವಾಗಿ ಕಟ್ಟುವ ನಮ್ಮ ನಿಮ್ಮೆಲ್ಲರ ಪ್ರಯತ್ನದ 'ಕೈ'ಗಳು ಹೊಸ ವರ್ಷದಲ್ಲಿ ಇನ್ನಷ್ಟು ಬಲಶಾಲಿಯಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ಭಗವಂತನು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ, ಸಮೃದ್ಧಿ ಹಾಗೂ ಸದ್ಬುದ್ದಿಯನ್ನು ನೀಡಿ ಹರಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲೆಡೆ ಮತ್ತೊಮ್ಮೆ ಕೋವಿಡ್ ಭೀತಿ ಹೆಚ್ಚಾಗುತ್ತಿದ್ದು, ಯಾವುದೇ ಕಾರಣಕ್ಕೂ ಎಚ್ಚರ ತಪ್ಪದೆ, ಜಾಗರೂಕತೆಯಿಂದ ಹೊಸ ವರ್ಷವನ್ನು ಸ್ವಾಗತಿಸಿ ಎಂದು ಕರೆ ನೀಡಿದ್ದಾರೆ.
ಎಲ್ಲೆಡೆ ಮತ್ತೊಮ್ಮೆ ಕೋವಿಡ್ ಭೀತಿ ಹೆಚ್ಚಾಗುತ್ತಿದ್ದು, ಯಾವುದೇ ಕಾರಣಕ್ಕೂ ಎಚ್ಚರ ತಪ್ಪದೆ, ಜಾಗರೂಕತೆಯಿಂದ ಹೊಸ ವರ್ಷವನ್ನು ಆಚರಣೆ ಮಾಡಿ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ.
ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಸಮಸ್ತ ಕನ್ನಡಿಗರಿಗೆ ಹೊಸ ವರ್ಷದ ಶುಭಾಶಯಗಳು. 2022ರಲ್ಲಿ ಎಲ್ಲರಿಗೂ ನವಚೈತನ್ಯ ತುಂಬಿ, ಉತ್ತಮ ಆಯುರಾರೋಗ್ಯವನ್ನು ಆ ಭಗವಂತ ಕರುಣಿಸಲಿ. ಕರುನಾಡಿನಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾರಕ ವೈರಸ್ ಮಾರಿ ಮತ್ತೆ ವಿಜೃಂಭಿಸುತ್ತಿದ್ದು, ಯಾರೂ ಎಚ್ಚರ ತಪ್ಪುವುದು ಬೇಡ ಎನ್ನುವುದು ನನ್ನ ಕಳಕಳಿ. ಹೊಸ ವರ್ಷದ ದಿನ ದೇಗುಲಗಳಲ್ಲಿ ಭಕ್ತಸಂದಣಿ ದಟ್ಟವಾಗಿರುತ್ತದೆ. ಎಲ್ಲೂ ದೇವರ ದರ್ಶನಕ್ಕೆ ನೂಕುನುಗ್ಗಲು ಆಗುವುದು ಬೇಡ. ಕೋವಿಡ್ ಮಾರಿ ಇನ್ನೂ ಇದ್ದು, ಒಮಿಕ್ರಾನ್ ರೂಪದಲ್ಲಿ ಕಾಡುತ್ತಿದೆ. ಭಕ್ತರು ಕೋವಿಡ್ ನಿಯಮಗಳೊಂದಿಗೆ ಶಾಂತಚಿತ್ತರಾಗಿ ಭಗವಂತನ ದರ್ಶನ ಪಡೆಯಲಿ ಎಂಬುದು ನನ್ನ ಕಳಕಳಿಯ ಮನವಿ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ
ಹೊಸ ವರ್ಷದ ಮೊದಲ ದಿನವೇ ಜಮ್ಮುವಿನ ಕತ್ರಾದಲ್ಲಿರುವ ಮಾತೆ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿ 12 ಭಕ್ತರು ಸಾವನ್ನಪ್ಪಿರುವ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಗಾಯಗೊಂಡಿರುವ ಭಕ್ತರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ.. ಅವರು ನೀಡಿರುವ ಸಂದೇಶ ಏನು?