ಬೆಂಗಳೂರು:ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರು ಪಾಲ್ಗೊಂಡಿದ್ದರು. ಬದ್ಧತೆ ಹೋರಾಟದಿಂದ ಅತಿಶಕ್ತ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಧಿಸಿ ತೋರಿಸಿದರು. ಬಹುತೇಕ ಹೋರಾಟಗಾರರು ಅನಾಮಧೇಯರಾಗಿಯೇ ಉಳಿದರು. ಅಂಥ ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ ಎಂದು ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಹೊಸ ಯೋಜನೆಗಳ ಘೋಷಣೆ ಮಾಡಿದರು. ಭಾರತದಲ್ಲಿ ಸೇವಿಸುತ್ತಿರುವ ಕರ್ನಾಟಕ ಯೋಧರಿಗೆ ರಾಜ್ಯ ಸರ್ಕಾರ ದೂರದೃಷ್ಟಿಯನ್ನಿಟ್ಟುಕೊಂಡು ಯೋಜನೆಯೊಂದನ್ನು ಘೋಷಿಸಿದೆ.
ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತ ಪಟ್ಟರೆ ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು. ಯಾವುದೇ ಪ್ರಶ್ನೆಗಳನ್ನು ಕೇಳದೆ ನೇರವಾಗಿ ಅವರ ಮನೆಗಳಿಗೆ ಉದ್ಯೋಗ ಆದೇಶವನ್ನು ನೀಡಲಾಗುವುದು. ಇದರ ಜೊತೆಗೆ ಹುತಾತ್ಮ ಸೈನಿಕರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶೇ 100 ಶೌಚಾಲಯ ನಿರ್ಮಾಣ: ಒಂದು ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಿಸುವುದಾಗಿ ಸಿಎಂ ತಿಳಿಸಿದರು. ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ. 100 ರಷ್ಟು ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತದೆ. 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದರು.