ಬೆಂಗಳೂರು:ಬೆಂಗಳೂರಿನ ಕೆರೆಗಳಿಗೆ ಒಳಚರಂಡಿ ನೀರು ಸೇರಿದಂತೆ ಕ್ರಮ ಕೈಗೊಳ್ಳಬೇಕು. ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಇನ್ನೂ ನೊರೆ ಬರುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಮಹಾನಗರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಕುರಿತು ಮುಖ್ಯಮಂತ್ರಿ ಬಿಎಸ್ವೈ ಅಧ್ಯಕ್ಷತೆಯಲ್ಲಿ ಇಂದು ಸಭೆ ಜರುಗಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆ ಸಚಿವ ಸಿ.ಸಿ. ಪಾಟೀಲ್, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಬಿಬಿಎಂಪಿ ಆಯುಕ್ತ ಬಿ. ಹೆಚ್.ಅನಿಲ್ ಕುಮಾರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದ ಮಾರಗೊಂಡನಹಳ್ಳಿ ಕೆರೆ, ಶಿಕಾರಿಪಾಳ್ಯ ಕೆರೆ, ಯರಂಡಹಳ್ಳಿ ಕೆರೆ, ಕಮ್ಮಸಂದ್ರ ಕೆರೆ, ದೊಡ್ಡತೂಗೂರು ಕೆರೆ, ಸೇರಿದಂತೆ ಇತರೆ ಎರಡು ಕೆರೆಗಳನ್ನು ಖಾಸಗಿ ಅವರು ಅಭಿವೃದ್ಧಿಪಡಿಸುತ್ತಿದ್ದು, ಬೆಂಗಳೂರಿನ ಇನ್ನೂ ಕೆಲ ಕೆರೆಗಳನ್ನು ಖಾಸಗಿ ಅವರ ಜೊತೆಗೂಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು.