ಬೆಂಗಳೂರು:ಬಹುಭಾಷಾ ನಟಿ, ಕನ್ನಡ ಚಿತ್ರರಂಗದ ಮೇರು ಕಲಾವಿದೆ ಜಯಂತಿ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಿಎಂ ಸಂತಾಪ
ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ಅಭಿನಯ ಶಾರದೆ ಎಂಬ ಬಿರುದಿಗೆ ಅನ್ವರ್ಥವಾಗಿದ್ದರು. ಅವರ ನಿಧನದಿಂದ ನಾಡು ಅದ್ಭುತ ಕಲಾವಿದೆಯನ್ನು ಕಳೆದುಕೊಂಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹೆಚ್ಡಿಕೆ ಸಂತಾಪ
'ಅಭಿನಯ ಶಾರದೆ' ಜಯಂತಿ ಅವರು ನಿಧನರಾದ ಸಂಗತಿ ಬೇಸರ ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡಿಗರೆಂಬುದೇ ನಮ್ಮ ಹೆಮ್ಮೆ. ಅವರಿಗೆ ಸದ್ಗತಿ ದೊರೆಯಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.
ಡಿಕೆಶಿ ಸಂತಾಪ
ತಮ್ಮ ಮನೋಜ್ಞ ನಟನೆಯಿಂದ 'ಅಭಿನಯ ಶಾರದೆ' ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ತಾವು ಅಭಿನಯಿಸುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ ಜಯಂತಿ ಅವರು ಬೆಳ್ಳಿ ತೆರೆಯ ಸ್ವರ್ಣ ಕಮಲದಂತಿದ್ದರು ಎಂದು ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
ಕಟೀಲ್ ಸಂತಾಪ
'ಜೇನುಗೂಡು' ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು. ಮೃತರ ಕುಟುಂಬ, ಬಂಧುಮಿತ್ರರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.
ಸಚಿವ ಸುಧಾಕರ್ ಸಂತಾಪ
ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. 6 ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಒನಕೆ ಓಬವ್ವ ರೀತಿಯ ಪೌರಾಣಿಕ ಪಾತ್ರ ಸೇರಿದಂತೆ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಹಲವು ರಾಜಕೀಯ ಮುಖಂಡರು, ಜನ ಪ್ರತಿನಿಧಿಗಳು ಹಿರಿಯ ನಟಿ ನಿಧನಕ್ಕೆ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ಕಳಚಿತು ಚಿತ್ರರಂಗದ ಮತ್ತೊಂದು ಕೊಂಡಿ.. ಜಯಂತಿ ಜೀವನ ಪಯಣ ಹೇಗಿತ್ತು?