ಬೆಂಗಳೂರು: ಪ್ರಮುಖ ನಗರಗಳಲ್ಲಿ ವರ್ಷಗಳು ಕಳೆದಂತೆ ಕಟ್ಟಡಗಳು ಹಳೆಯದಾಗಿ ಶಿಥಿಲಾವಸ್ಥೆಗೆ ತಲುಪುತ್ತವೆ. ಇಂತಹ ಕಟ್ಟಡಗಳನ್ನು ಗುರುತಿಸಿ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಕೆಡವಲು ಸಂಬಂಧಿಸಿದ ಪಾಲಿಕೆಗಳು ಸೂಚಿಸುತ್ತವೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಈ ಕಾರ್ಯ ನನೆಗುದಿಗೆ ಬಿದ್ದಿದೆ.
ರಾಜ್ಯದಲ್ಲಿ ಪ್ರಮುಖ ಮಹಾನಗರಗಳಲ್ಲಿ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ಜನ ವಾಸಿಸುತ್ತಿರುವುದು ಸಾಮಾನ್ಯ. ಆದರೆ, ಇಂಥ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಅತಿ ಮಳೆಯಿಂದ ನೀರು ಹಿಡಿದು ಹಳೆ ಕಟ್ಟಡಗಳು ಕುಸಿದು ಬಿದ್ದರೆ ಅಪಾರ ಪ್ರಾಣ ಹಾನಿ ಸಂಭವಿಸುತ್ತದೆ. ಸಾಮಾನ್ಯವಾಗಿ ಕಟ್ಟಡಗಳು ವರ್ಷಗಳು ಕಳೆದಂತೆ ಶಿಥಿಲಾವಸ್ಥೆಗೆ ತಲುಪುವುದು ಕಾಮನ್. ಇಂತಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಯಾವತ್ತಿಗೂ ಅಪಾಯಕಾರಿ. ಅಂತಹ ಕಟ್ಟಡಗಳನ್ನು ಗುರುತಿಸಿ ಕೆಡವಲು ಸಂಬಂಧಿಸಿದ ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳು ಪ್ರತಿ ವರ್ಷವೂ ಸೂಚಿಸುತ್ತವೆ.
ಕಳೆದ ವರ್ಷ ಹುಬ್ಬಳ್ಳಿ-ಧಾರಾವಾಡ ಪಾಲಿಕೆಯು ಮನೆ ಮಾಲೀಕರಿಗೆ ನೋಟಿಸ್ ನೀಡಿ, ಸಾವಿರಾರು ಕಟ್ಟಡಗಳು ಧರೆಗುರುಳಿಸಿತ್ತು. ಈ ವರ್ಷವೂ ಹಲವು ಕಟ್ಟಡಗಳಿಗೆ ನೋಟಿಸ್ ನೀಡಿ, ಮರು ಸರ್ವೇ ಕಾರ್ಯ ಕೈಗೊಂಡಿದೆ. ರಾಜ್ಯದಲ್ಲಿ ಹಲವಾರು ಕಟ್ಟಡಗಳು ಶಿಥಿಲಗೊಂಡಿದ್ದು, ಆಹುತಿಗಾಗಿ ಕಾಯುತ್ತಿವೆ. ಆದರೆ, ಪಾಲಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಸರ್ವೇ ನಡೆಸಿ ನೋಟಿಸ್ ನೀಡುತ್ತಾರೆ. ಆದರೆ, ಮನೆಗಳ ತೆರವು ಕಾರ್ಯಾಚರಣೆ ಮಾಡುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳ ಒತ್ತಾಯ ಕಟ್ಟಡ ಕುಸಿತಗೊಂಡರೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಅಕ್ಕಪಕ್ಕದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಸಂಭವಿಸುತ್ತದೆ. ಇದಕ್ಕೂ ಮೊದಲೇ ಪಾಲಿಕೆ ಎಚ್ಚೆತ್ತು ಶಿಥಿಲವಾದ ಹಳೆಯ ಕಟ್ಟಡ ತೆರವುಗೊಳಿಸುವುದು ಅವಶ್ಯ. ಆದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದ್ದು ಈ ಕಾರ್ಯ ನೆನೆಗುದಿಗೆ ಬಿದ್ದಿದೆ. ಕೊರೊನಾ ಕಾರಣದಿಂದ ಹಳೆಯ ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲ್ಪಡದೆ ಇರುವುದು ಅಪಾಯಕ್ಕೆ ಎಡೆಮಾಡಿದಂತಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.