ಬೆಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿ ದಶಕವಾದರೂ ಕನ್ನಡ ಭಾಷೆ ಸಂಬಂಧ ಸಂಶೋಧನೆ ಹಾಗು ಅಭಿವೃದ್ಧಿ ಕಾರ್ಯಗಳು ಮಾತ್ರ ಮರೀಚಿಕೆಯಾಗಿದೆ. ಇದಕ್ಕೆ ಕಾರಣ ಖಾಯಂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಸ್ಥಾಪನೆ ಆಗದಿರುವುದು.
ಇಂದು ಕರ್ನಾಟಕ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ಸಂದರ್ಭ ಕನ್ನಡ ನಾಡು, ನುಡಿ, ಅದರ ಹಿರಿಮೆ, ಗರಿಮೆ, ಭಾಷಾ ಶ್ರೀಮಂತಿಕೆ ಬಗ್ಗೆ ಆತ್ಮಾವಲೋಕನ ಅತ್ಯಗತ್ಯ. ಆದರೆ ಬಹುತೇಕ ಕನ್ನಡ ಪ್ರೇಮ, ಅದರ ಅನುಷ್ಠಾನ ಹಾಗು ಅಭಿವೃದ್ಧಿ ಕೇವಲ ರಾಜ್ಯೋತ್ಸವ ದಿನದ ಭಾಷಣಕ್ಕೆ ಸೀಮಿತವಾಗಿದೆ. ಬಳಿಕ ಎಲ್ಲವೂ ಕಾಲದಲ್ಲಿ ಲೀನವಾಗಿ ಹೋಗುತ್ತದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಿಕ್ಕಿದ್ದರೂ ಕನ್ನಡದ ಕಂಪನ್ನು ಇನ್ನೂ ಪ್ರಬಲವಾಗಿ ಅಚ್ಚೊತ್ತಲು, ವಿಸ್ತರಿಸಲು ಸಾಧ್ಯವಾಗಿಲ್ಲ.
ಶಾಸ್ತ್ರೀಯ ಭಾಷೆ ಸ್ಥಾನಮಾನದ ಸ್ಥಿತಿಗತಿ ಹೇಗಿದೆ?:
ಕನ್ನಡಕ್ಕೆ 2008ರಲ್ಲಿ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿತ್ತು. ನಮ್ಮದೇ ಆದ ಗೊಂದಲ, ತಪ್ಪುಗಳಿಂದ ಹತ್ತು ವರ್ಷಗಳಲ್ಲಿ ತಲುಪಬೇಕಾದ ಗುರಿಯನ್ನು ಇನ್ನೂ ತಲುಪಿಲ್ಲ. 2011ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ’ದ ಉದ್ಘಾಟನೆಯಾಗಿ ಒಂದು ಉಪ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಶಾಸ್ತ್ರೀಯ ಭಾಷೆಗೆ ಕೇಂದ್ರ ಸರ್ಕಾರವು ನೀಡುವ ಸವಲತ್ತನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ.
ಪ್ರತ್ಯೇಕ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಕಟ್ಟಡ ಸ್ಥಾಪನೆಗೆ ಇನ್ನೂ ಕಾಲಕೂಡಿ ಬಂದಿಲ್ಲ. ಮೈಸೂರು ವಿವಿಯಲ್ಲಿ ಐದು ಎಕರೆ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಮೂರು ಎಕರೆ ಜಮೀನು ಗುರುತಿಸಲಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಬೇಕು. ಈ ಬಗ್ಗೆ ಯಾವುದೇ ಸರ್ಕಾರಗಳು ಗಂಭೀರ ಹೆಜ್ಜೆಯಿಟ್ಟಿಲ್ಲ.
2011-12ರಲ್ಲಿ ₹ 54.56 ಲಕ್ಷ, 2012-13ರಲ್ಲಿ ₹ 2.18 ಕೋಟಿ, 2013-14ರಲ್ಲಿ ₹ 2.13 ಕೋಟಿ ಹಾಗು 2014-15ರಲ್ಲಿ ₹ 1 ಕೋಟಿ ಕೇಂದ್ರ ಸರ್ಕಾರ ಕನ್ನಡ ಭಾಷೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಿಡುಗಡೆ ಮಾಡಿತ್ತು. ಸ್ಥಾನಮಾನ ಸಿಕ್ಕ ಬಳಿಕ ಈವರೆಗೆ ₹10 ಕೋಟಿ ಬಂದಿದೆ. ಬಂದ ಅನುದಾನವನ್ನು ಇಲ್ಲಿಯವರೆಗೆ ಸಂಶೋಧನೆ ಮತ್ತು ಸಿಬ್ಬಂದಿ ವೇತನ ಮತ್ತು ನಿರ್ವಹಣೆಗೆ ಮಾತ್ರ ಬಳಕೆಯಾಗುತ್ತಿದೆ. ಸಮರ್ಪಕವಾಗಿ ಬಳಸದ ಕಾರಣ ಅನುದಾನ ವಾಪಸ್ ಹೋಗಿದೆ. ಅತಿ ಹೆಚ್ಚು ಅಂದರೆ ವಾರ್ಷಿಕ ₹ 84 ಲಕ್ಷ ಖರ್ಚು ಮಾಡಲು ಸಾಧ್ಯವಾಗಿದೆ. ಉಳಿದ ಹಣವನ್ನೆಲ್ಲ ವಾಪಸ್ ಕಳುಹಿಸಲಾಗಿದೆ.
ಗ್ರಹಣ ಮೋಕ್ಷ ಆಗುತ್ತಾ?:
ಕಳೆದ ತಿಂಗಳು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಚಟುವಟಿಕೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿತ್ತು. ಈ ಸಭೆಗೆ ಸಾಹಿತಿಗಳು, ತಜ್ಞರು, ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು. ಕನ್ನಡ ಶಾಸ್ತ್ರೀಯ ಕೇಂದ್ರಕ್ಕೆ ಕಾಯಕಲ್ಪ ನೀಡಲು ಗಂಭೀರ ಸಮಾಲೋಚನೆ ನಡೆದಿದೆ.
ಅದರಂತೆ ನವೆಂಬರ್ ಒಳಗಾಗಿ ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನ ಬಳಕೆಗೆ ಬೇಕಾದ ಪ್ರಾಥಮಿಕ ಹಂತದ ರೂಪುರೇಷೆ ರೂಪಿಸಲು ನಿರ್ಧರಿಸಲಾಗಿದೆ. ತುರ್ತಾಗಿ ಆಗಬೇಕಾಗಿರುವ ಕೆಲಸಗಳನ್ನು ಮಾಡಿ ಕೇಂದ್ರಕ್ಕೆ ವರದಿ ನೀಡಲು ತೀರ್ಮಾನಿಸಲಾಗಿದೆ. ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ರೂಪುರೇಷೆ ಬಹುತೇಕ ಸಿದ್ಧಪಡಿಸಿದ್ದಾರೆ. ಶಾಸ್ತ್ರೀಯ ಭಾಷೆ ಕೇಂದ್ರ ಸ್ಥಾಪನೆಗೆ ಪೂರಕ ವಾತಾವರಣ ಇರೋದು ಮೈಸೂರಿನಲ್ಲಿ ಎಂಬುದರ ಬಗ್ಗೆ ಹೆಚ್ಚಿನ ಅಭಿಪ್ರಾಯ.