ಕರ್ನಾಟಕ

karnataka

ETV Bharat / city

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ನಂತರ ಲಭಿಸಿದ್ದೇನು? - ಕನ್ನಡ ಶಾಸ್ತ್ರೀಯ ಭಾಷೆ

ಕನ್ನಡಕ್ಕೆ ತಡವಾಗಿಯಾದರೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. 2005ರಿಂದಲೂ ನಿರಂತರ ಹೋರಾಟಕ್ಕೆ ಸಂದ ಜಯವಿದು ಎನ್ನುವುದರಲ್ಲಿ ಸಂದೇಹವಿಲ್ಲ. ಶಾಸ್ತ್ರೀಯ ಭಾಷೆಯಿಂದ ಏನು ಪ್ರಯೋಜನ ? ಎಂದು ಅನ್ನಿಸಬಹುದು. ಇದಕ್ಕೆ ಇಲ್ಲಿದೆ ಉತ್ತರ.

classic-status-for-kannada

By

Published : Nov 1, 2019, 11:30 PM IST

ಬೆಂಗಳೂರು:ಕನ್ನಡಕ್ಕೆ ತಡವಾಗಿಯಾದರೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. 2005ರಿಂದಲೂ ನಿರಂತರ ಹೋರಾಟಕ್ಕೆ ಸಂದ ಜಯವಿದು ಎನ್ನುವುದರಲ್ಲಿ ಸಂದೇಹವಿಲ್ಲ. ಶಾಸ್ತ್ರೀಯ ಭಾಷೆಯಿಂದ ಏನು ಪ್ರಯೋಜನ ? ಎಂದು ಅನ್ನಿಸಬಹುದು. ಇದಕ್ಕೆ ಇಲ್ಲಿದೆ ಉತ್ತರ.

ಶಾಸ್ತ್ರೀಯ ಭಾಷೆಯ ಕುರಿತಂತೆ ಕೆಲಸ ಮಾಡಿದ ಶ್ರೇಷ್ಠ ವಿದ್ವಾಂಸರಿಬ್ಬರಿಗೆ ಪ್ರತಿವರ್ಷ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಗುತ್ತದೆ. ಭಾಷೆಯ ಅಧ್ಯಯನಕ್ಕೆ ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆ. ಕೇಂದ್ರೀಯ ವಿವಿಗಳಲ್ಲಿ ಅಧ್ಯಯನ ಪೀಠಗಳ ಆರಂಭ. ಕನ್ನಡ ಭಾಷೆಯನ್ನು ಕರ್ನಾಟಕ ಮತ್ತು ಹೊರರಾಜ್ಯಗಳಲ್ಲಿ ಅಭಿವೃದ್ಧಿಪಡಿಸುವುದು, ಪ್ರಚಾರ ಮಾಡುವುದು ಮತ್ತು ಸಂರಕ್ಷಿಸಲು ಕೇಂದ್ರದಿಂದ ಆರ್ಥಿಕ ನೆರವು ಸಿಗಲಿದೆ.

ಶಾಸ್ತ್ರೀಯ ಭಾಷೆ ಯಾವುದು?:

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸ ಜಾರ್ಜ್ ಎಲ್.ಹಾರ್ಟ್ ಎಂಬವರು ಶಾಸ್ತ್ರೀಯ ಭಾಷೆಗೆ ಈ ರೀತಿ ವ್ಯಾಖ್ಯಾನ ನೀಡಿದ್ದಾರೆ. ಒಂದು ಸಾವಿರ ವರ್ಷಕ್ಕೂ ಪುರಾತನ, ತಲೆ ತಲೆಮಾರುಗಳಿಂದ ಅತ್ಯಂತ ಮೌಲಿಕ ಪರಂಪರೆ ಎಂದು ಪರಿಗಣಿತ, ಬೇರೆ ಭಾಷೆ-ಸಮುದಾಯದಿಂದ ಸ್ವೀಕಾರ, ಕ್ಲಾಸಿಕಲ್ ಭಾಷೆ ಮತ್ತು ಅದರ ಸಾಹಿತ್ಯ, ಪ್ರಸ್ತುತ ಭಾಷೆ-ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು.

ಕಸಾಪ ಅಧ್ಯಕ್ಷ ಮನುಬಳಿಗಾರ್​

ಕನ್ನಡದ ಇತಿಹಾಸ:

ಕನ್ನಡ ಕ್ರಿ.ಪೂ 6 ರಿಂದಲೇ ತನ್ನ ಅಸ್ತಿತ್ವವನ್ನು ಗುರುತಿಸಿದೆ. ಶ್ರೀಸಾಮಾನ್ಯರೇ ಕ್ರಿ.ಪೂ 3-4ರಲ್ಲಿಯೇ ಆಡು ಭಾಷೆಯಾಗಿ ಕನ್ನಡವನ್ನು ಬಳಸುತ್ತಿದ್ದರು. ಸಂಸ್ಕೃತ ಮತ್ತು ಪ್ರಾಕೃತದಿಂದಲೇ ಮೊತ್ತ ಮೊದಲಿಗೆ ಕನ್ನಡ ಭಾಷೆ ಪ್ರಭಾವ ಹೊಂದಿದೆ. ಅದೇ ರೀತಿ ತಮಿಳಿಗೂ ಕನ್ನಡದ್ದೇ ಪ್ರಭಾವ. ರಾಜಕೀಯವಾಗಿ ಆಡಳಿತಾತ್ಮಕವಾಗಿ ಕನ್ನಡ 500 ವರ್ಷಗಳಿಂದ ಸ್ಥಾನ ಗಳಿಸಿಕೊಟ್ಟಿದೆ ಎಂದು ಹೇಳುತ್ತಾರೆ ಸಂಶೋಧಕರು.

ಶಾಸ್ತ್ರೀಯ ಭಾಷೆಯ ಸ್ಥಾನಮಾನಗಳಿಂದ ಪ್ರಯೋಜನ:

ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಅದಕ್ಕೆ ಪ್ರತಿಷ್ಠೆ, ಮನ್ನಣೆ ಸಿಗುತ್ತದೆ. ಶ್ರೇಷ್ಠ ದರ್ಜೆಯ ಅಧ್ಯಯನ ಕೇಂದ್ರ ಸ್ಥಾಪನೆಯಾಗುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳ ಸ್ಥಾಪನೆ, ಅಂತರ್ಜಾಲ ಬೋಧನಾ ವ್ಯವಸ್ಥೆ, ಸಂಶೋಧನೆಗೆ ಪ್ರಾಶಸ್ತ್ಯ, ಭಾಷಾಂತರ, ಕಲೆ ವಾಸ್ತುಶಿಲ್ಪ ಪುರಾತತ್ವಗಳ ಅಧ್ಯಯನ ಹಾಗೂ ಸಂಶೋಧನೆ, ಭಾಷಾಶಾಸ್ತ್ರದ ಅಧ್ಯಯನ, ಇದರ ಜೊತೆಗೆ ಇನ್ನು ಕೆಲವು ಯೋಜನೆಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಸಾಹಿತ್ಯ ರಚನೆಯಿಂದಲೇ ಕನ್ನಡ ಭಾಷೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಸಾಹಿತಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಬೇಕಾದದ್ದು ಸಹಜ. ಅದರ ಜತೆಗೆ ಸಾಹಿತ್ಯೇತರ ವಿಷಯಗಳ ಕಡೆಗೂ ಗಮನಹರಿಸಬೇಕು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆತಾಗ ಲಭಿಸಿದ ಆರ್ಥಿಕ ನೆರವಿನಿಂದ ಅಂಚಿಗೆ ತಳ್ಳಲ್ಪಟ್ಟ ಭಾಷೆ, ಸಂಸ್ಕೃತಿಗಳ ಬಗೆಗೆ ಅಧ್ಯಯನಗಳು ನಡೆದಿವೆ. ಸ್ಥಾನಮಾನದಿಂದ ಸಹಜವಾಗಿಯೇ ಅಧ್ಯಯಕ್ಕೆ ನಿಧಿಸಹಾಯ ಲಭ್ಯವಾಗುತ್ತದೆ. ರಾಜಧಾನಿಯಲ್ಲಿ ಅಧ್ಯಯನ ಕೇಂದ್ರವನ್ನು ತೆರೆದಿದೆ. ಇದಕ್ಕೆ ಕೋಟ್ಯಂತರ ರೂಪಾಯಿ ಹಣ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಕನ್ನಡಕ್ಕೆ ನೆಲೆಯಿಲ್ಲದಾಗಿದೆ. ಅನೇಕ ಕನ್ನಡದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕಾಲೇಜುಗಳಲ್ಲಿ ಕನ್ನಡ ಪದವಿ ತರಗತಿಗಳನ್ನು ಮುಚ್ಚಲಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ ವಿದ್ಯಾರ್ಥಿಗಳ ಸಂಖ್ಯೆ ಕ್ಷಿಣಿಸುತ್ತಿದೆ. ಮೊದಲು ಕರ್ನಾಟಕದಲ್ಲಿ ಕನ್ನಡ, ಕನ್ನಡಿಗರು ಗಟ್ಟಿಯಾಗಿ ನೆಲೆ ನಿಲ್ಲಬೇಕು. ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಹಾಗೆ ಮಾತ್ರವಲ್ಲ, ಯಾವುದೇ ಮೂಲದಿಂದ ಬಂದ ಹಣವೂ ಮೊದಲು ಕನ್ನಡಿಗರಿಗೆ ಜೀವನ ನಡೆಸಲು ಅನುಕೂಲವಾಗುವ ರೀತಿ ಬಳಕೆಯಾಬೇಕು. ಮುಖ್ಯವಾಗಿ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಹಣಕಾಸಿನ ಅನುಕೂಲವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೂ ನೆರವಾಗಬೇಕು. ಆ ಮೂಲಕ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಭದ್ರತೆ ದೊರೆಯಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ದೊರೆತ ನಂತರದಲ್ಲಿ ಬಗೆಹರಿಯದೆ ಕಗ್ಗಂಟಾಗಿದ್ದ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ಥಳ ವಿವಾದ ಕಡೆಗೂ ಬಗೆಹರಿದಿದೆ. ಮೈಸೂರಿನಲ್ಲೇ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಸಿಕ್ಕ ಮೇಲೆ ಕೆಲವೇ ದಿನಗಳಲ್ಲಿ ಅಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ (2008ರಲ್ಲಿ) ₹ 22 ಕೋಟಿ ಮಂಜೂರು ಮಾಡಿತ್ತು. ರಾಜ್ಯದ 11 ವಿವಿಗಳಿಗೆ ತಲಾ ಒಂದು ಕೋಟಿ ಬಿಡುಗಡೆ ಮಾಡಿದರು. ತಾಳೆಗರಿ ಸೇರಿದಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ, ಕನ್ನಡ ತಂತ್ರಾಂಶ ಅಭಿವೃದ್ಧಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಅದು ಹೆಚ್ಚಿನ ವೇಗದಲ್ಲಿ ಆಗಬೇಕಿದೆ.

ABOUT THE AUTHOR

...view details