ಬೆಂಗಳೂರು: ವಸತಿ ಯೋಜನೆ ವಿಚಾರವಾಗಿ ವಿಧಾನಸಭೆಯಲ್ಲಿ ಸಚಿವ ವಿ. ಸೋಮಣ್ಣ ಮತ್ತು ಈಶ್ವರ್ ಖಂಡ್ರೆ ಮಧ್ಯೆ ಜಟಾಪಟಿ ನಡೆಯಿತು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವಂದನಾ ನಿರ್ಣಯ ಮೇಲೆ ಚರ್ಚೆ ವೇಳೆ ಮಾತನಾಡಿದ ಈಶ್ವರ್ ಖಂಡ್ರೆ, ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳ ಅನುದಾನ ವಾಪಸ್ ಪಡೆಯಲಾಗಿದೆ. ವೈಯಕ್ತಿಕ ದ್ವೇಷದಿಂದ, ದುರುದ್ದೇಶಪೂರಿತವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಸಚಿವ ವಿ. ಸೋಮಣ್ಣ, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆಯಲ್ಲಿ ಅಕ್ರಮ ನಡೆದಿದೆ. ಶಾಸಕರೇ ವಸತಿ ಮಂಜೂರಾತಿ ಆದೇಶವನ್ನು ಫಲಾನುಭವಿಗಳಿಗೆ ನೀಡಿದ್ದಾರೆ. ಅನರ್ಹರು ವಸತಿ ಫಲಾನುಭವಿಗಳಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರು ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ. ನಾನು ಬೀದರ್ಗೆ ಹೋದಾಗ ಈ ಅವ್ಯವಹಾರದ ಮಾತು ಕೇಳಿಬಂತು. ಸಿಎಂ ತನಿಖೆ ನಡೆಸಲು ಸೂಚನೆ ನೀಡಿದರು. 17,000 ಮನೆಗಳನ್ನು ಏಕಕಾಲದಲ್ಲಿ ಮಂಜೂರಾತಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಚಿಂಚೋಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಶಾಸಕರ ಹೆಸರಲ್ಲಿ ಮನೆ ಮಂಜೂರಾತಿ ನೀಡಲಾಗಿದೆ ಎಂದರೆ ಏನರ್ಥ? ಇಒ ಕೊಡಬೇಕಾದ ಕಾರ್ಯಾದೇಶವನ್ನು ಶಾಸಕರೇ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಚಿವರ ಆರೋಪಕ್ಕೆ ಶಾಸಕ ಈಶ್ವರ್ ಖಂಡ್ರೆ ಕೆಂಡಾಮಂಡಲರಾದರು. ಸಚಿವರು ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಚಿವರು ದುರುದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ, ರಾಜಕೀಯ ವಿರೋಧಿಯಿಂದ ದೂರು ಪಡೆದುಕೊಂಡು ಕುತಂತ್ರದಿಂದ ಸುಳ್ಳು ವರದಿ ಸೃಷ್ಟಿಯಾಗಿದೆ. 17,000 ಮನೆ ಮಂಜೂರಾತಿ ಆಗಿದೆ. ತನಿಖೆ ನೆಪದಲ್ಲಿ ಯಾರಿಗೂ ಮನೆ ಕೊಡಬಾರದು ಎಂಬ ಹುನ್ನಾರ ನಡೆದಿದೆ. ಭ್ರಷ್ಟ ಅಧಿಕಾರಿ ಮಹದೇವ ಪ್ರಸಾದ್ ಮೂಲಕ 17,000 ಮನೆ ಮಂಜೂರಾತಿ ಸಂಬಂಧ ತನಿಖೆ ನಡೆಸಿ, ವರದಿ ಸೃಷ್ಟಿಸಲಾಗಿದೆ ಎಂದು ತಿರುಗೇಟು ನೀಡಿದರು.
ನಾನೇ ಮಂಜೂರಾತಿ ಆದೇಶ ಕೊಟ್ಟಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಮಂಜೂರಾತಿ ಆದೇಶ ಕೊಡುವುದಕ್ಕೆ ಆಗುತ್ತಾ? ನಾನು ಕೊಟ್ಟಿದ್ದು ಮಾಹಿತಿ ಪತ್ರ. ಸಚಿವರು ಸುಳ್ಳು ಹೇಳುತ್ತಿದ್ದಾರೆ. ಸಿಎಂರನ್ನೂ ದಾರಿ ತಪ್ಪಿಸಲಾಗುತ್ತಿದೆ. ಆದೇಶ ಪತ್ರ ಕೊಟ್ಟಿಲ್ಲ ಬದಲಾಗಿ ಮಾಹಿತಿ ಪತ್ರ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧದ ಮುಂದೆ ಹ್ಯಾಂಗ್ ಮಾಡಿಕೊಳ್ಳುತ್ತೇನೆ:ಈ ಯೋಜನೆಯಲ್ಲಿ ನಾನು ಸಣ್ಣ ಅಪಚಾರವನ್ನೂ ಮಾಡಿಲ್ಲ. ಸಣ್ಣ ಅಪಚಾರ ಮಾಡಿದ್ರೂ ವಿಧಾನಸೌಧದ ಎದುರು ನೇಣು ಹಾಕಿಕೊಳ್ಳುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.