ಬೆಂಗಳೂರು:ಆರ್.ಆರ್.ನಗರ ಉಪ ಚುನಾವಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಆರ್.ಆರ್.ನಗರ ಉಪ ಚುನಾವಣೆ: ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲಿವರೆಗೂ ಬಹಿರಂಗ ಪ್ರಚಾರ ಶಾಂತಿಯುತವಾಗಿ ನಡೆದಿದ್ದು, ಸಣ್ಣ-ಪುಟ್ಟ ತಕರಾರುಗಳನ್ನು ಸ್ಥಳೀಯ ಪೊಲೀಸರು ಬಗೆಹರಿಸಿಕೊಂಡಿದ್ದಾರೆ. ಅಹಿತಕರ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ನವೆಂಬರ್ 3ರಂದು ನಡೆಯುವ ಮತದಾನ ಶಾಂತಿಯುತವಾಗಿ ನಡೆಯಲು ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಚುನಾವಣಾ ಆಯೋಗದ ಸೂಚನೆಯಂತೆ ಪ್ರಚಾರ ಕಾರ್ಯದಲ್ಲಿ ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿದ ಹಿನ್ನೆಲೆ ಈವರೆಗೂ ಐದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಸೆಲೆಬ್ರಿಟಿಗಳ ಬಂಧನದಿಂದ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆದಿತ್ತು. ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಈಗಾಗಲೇ ಹೊರ ರಾಜ್ಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ವಿರುದ್ಧ ಈಗಾಗಲೇ ಚಾರ್ಜ್ಶೀಟ್ ಹಾಕಿದ್ದೇವೆ. ಇದೀಗ ನಾಪತ್ತೆಯಾಗಿರುವ ಆರೋಪಿ ಪತ್ತೆಗಾಗಿ ತಂಡ ರಚಿಸಿ, ಶೋಧ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.