ಬೆಂಗಳೂರು :ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ಸಾವಿನ ಹಿನ್ನೆಲೆ ಸಾರ್ವಜನಿಕ ದರ್ಶನ ಹಾಗೂ ಅಂತ್ಯಕ್ರಿಯೆ ವೇಳೆ ನಗರದಲ್ಲಿ ಯಾವುದೇ ರೀತಿಯ ಅಶಾಂತಿ ಕಾರಣವಾಗದಿರಲು ನಿರಂತವಾಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಹೃದಯಾಘಾತ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಪುನೀತ್ ಮೃತಪಟ್ಟಿದ್ದರು. ಈ ಸುದ್ದಿಯು ಸ್ಯಾಂಡಲ್‌ವುಡ್ ಅಲ್ಲದೇ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ಅಪ್ಪು ನಿಧನ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಯತ್ತ ಅಭಿಮಾನಿಗಳು ಧಾವಿಸಿದರು.
ಸಾರ್ವಜನಿಕ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಎರಡು ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಪ್ರಾರ್ಥಿವ ಶರೀರ ದರ್ಶನ ಪಡೆದಿದ್ದರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಹಾಗೂ ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಭಿಮಾನಿಗಳು ಜಮಾವಣೆಗೊಂಡಿದ್ದರು.
ಈ ವೇಳೆ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಾನೂನು ಸುವ್ಯವಸ್ಥೆ ವಿಭಾಗದಿಂದ 8 ಸಾವಿರ ಪೊಲೀಸರು, 3 ಸಾವಿರ ಟ್ರಾಫಿಕ್ ಪೊಲೀಸರು ಕೆಎಸ್ಆರ್ಪಿ, ಸಿಎಆರ್ ಪಡೆ ಸೇರಿದಂತೆ 20 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿತ್ತು.
ಹಗಲು-ರಾತ್ರಿ ಎನ್ನದೆ ಸತತ ಮೂರು ದಿನಗಳಿಂದ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಾರ್ವಜನಿಕ ದರ್ಶನ ವೇಳೆಯಲ್ಲಿ ಅಭಿಮಾನಿಗಳು ಪ್ರಬುದ್ಧ ವರ್ತನೆ ತೋರಿದ್ದಾರೆ. ಜೊತೆಗೆ ಮಾಧ್ಯಮಗಳು ಸಕಾರಾತ್ಮಕ ವರದಿ ನೀಡುವಲ್ಲಿ ಸಹಕರಿಸಿದ್ದಾರೆ. ಯಾವುದೇ ಹಿಂಸಾತ್ಮಕ ಘಟನೆಗಳಿಗೆ ಆಸ್ಪದ ನೀಡದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಭಿನಂದನೆ ಸಲ್ಲಿಸಿದ್ದಾರೆ.