ಬೆಂಗಳೂರು:ವಿಧಾನ ಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.
ಡಿ-ದರ್ಜೆ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಡಿ-ದರ್ಜೆಯ ಪುರುಷ ನೌಕರರಿಗೆ ಬಿಳಿ ಬಣ್ಣದ ಡ್ರೆಸ್ ಕೋಡ್, ಡಿ-ದರ್ಜೆಯ ಮಹಿಳಾ ನೌಕರರಿಗೆ ಮೆರೂನ್ ಡ್ರೆಸ್ ಕೋಡ್ ಧರಿಸುವಂತೆ ಸೂಚನೆ ನೀಡಲಾಗಿದೆ.
ಡಿ ದರ್ಜೆಯ ನೌಕರರು ಸೂಚಿಸಿದ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದ್ದು, ಚಾಲಕರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿ ಈ ಸಂಬಂಧ ಪರಿಷತ್ ಅಧೀನ ಕಾರ್ಯದರ್ಶಿ ಎಸ್.ಜಯಂತಿ ಡ್ರೆಸ್ ಕೋಡ್ ಸುತ್ತೋಲೆ ಹೊರಡಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರುಗಳಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.
ಮಾರ್ಚ್ 1ರಿಂದ ಬಯೋಮೆಟ್ರಿಕ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಮಾಡಬೇಕು. ಮಾರ್ಚ್ 15ರಿಂದ ಜಾರಿಗೆ ಬರುವಂತೆ 'ಡಿ' ಗುಂಪು ನೌಕರರು ಕಡ್ಡಾಯವಾಗಿ ಪುರುಷರು ಬಿಳಿ ಬಣ್ಣ ಮತ್ತು ಮಹಿಳೆಯರು ಮೆರೂನ್ ಬಣ್ಣದ ಸಮವಸ್ತ್ರವನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು. ವಾಹನ ಚಾಲಕರುಗಳು ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಕಾರಿಡಾರ್‌ನಲ್ಲಿ ಗುಂಪು ಸೇರುವುದು ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಲ್ಲುವುದನ್ನು ನಿಷೇಧಿಸಲಾಗಿದೆ. ಸಚಿವಾಲಯದ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರುಗಳನ್ನು ಅಧಿಕೃತ ಕೆಲಸ ಕಾರ್ಯಗಳಿಗೆ ಮಾತ್ರ ಕಚೇರಿಯಿಂದ ಹೊರಗಡೆ ಹೋಗಲು ಅನುಮತಿ ನೀಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.