ಕರ್ನಾಟಕ

karnataka

ETV Bharat / city

ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ ಕ್ರೈಸ್ತ ಸಮುದಾಯ

ಕ್ರೈಸ್ತ ಸಮುದಾಯದ ಎಲ್ಲಾ ಗಣ್ಯರ ಪರವಾಗಿ ಸಭೆಯಲ್ಲಿ ಮಾತನಾಡಿದ ಉದ್ಯಮಿ ರೊನಾಲ್ಡ್‌ ಕೊಲಾಸೋ, ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ ಮತ್ತು ದೇಶದ ಪ್ರತಿಯೊಂದು ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ.

By

Published : Feb 7, 2021, 8:32 PM IST

christian-community-joined-hand-to-build-rama-mandir
ಕ್ರೈಸ್ತ ಸಮುದಾಯ

ಬೆಂಗಳೂರು: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂ.ಗೂ ಅಧಿಕ ದೇಣಿಗೆ ನೀಡಿದ್ದಾರೆ.

ನಗರದಲ್ಲಿ ಇಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿದ್ದರಲ್ಲದೆ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಸುಳ್ಳು.. ಬಿಜೆಪಿ ಎಲ್ಲರ ಪಕ್ಷ

ಭಾರತೀಯ ಜನತಾ ಪಕ್ಷವು ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಸುಳ್ಳು. ಅನೇಕ ವರ್ಷಗಳಿಂದ ಇಂತಹ ಅಪಪ್ರಚಾರವನ್ನು ನಡೆಸಿಕೊಂಡು ಬರಲಾಗಿದೆ. ಬಿಜೆಪಿಯು ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ ಎಂದು ಡಿಸಿಎಂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ 'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌' ಎಂಬುದು ಬಿಜೆಪಿಯ ಮಂತ್ರವಾಗಿದೆ. ಎಲ್ಲರನ್ನೂ ಒಳಗೊಂಡು ದೇಶವನ್ನು ಮುನ್ನಡೆಸುವುದು ಪಕ್ಷದ ಗುರಿಯಾಗಿದೆ. ಕೇಂದ್ರದಲ್ಲಿರಬಹುದು ಅಥವಾ ರಾಜ್ಯದಲ್ಲಿರಬಹುದು, ಈ ತತ್ವದಡಿಯಲ್ಲೇ ಆಡಳಿತ ನಡೆಯುತ್ತಿದೆ ಎಂದು ಡಿಸಿಎಂ ನುಡಿದರು.

ನಾವೆಲ್ಲರೂ ಒಂದೇ ಎಂದ ಕೊಲಾಸೋ

ಕ್ರೈಸ್ತ ಸಮುದಾಯದ ಎಲ್ಲಾ ಗಣ್ಯರ ಪರವಾಗಿ ಸಭೆಯಲ್ಲಿ ಮಾತನಾಡಿದ ಉದ್ಯಮಿ ರೊನಾಲ್ಡ್‌ ಕೊಲಾಸೋ, ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ ಮತ್ತು ದೇಶದ ಪ್ರತಿಯೊಂದು ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ. ಶಿಕ್ಷಣ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಸೇವೆಯಲ್ಲಿ ನಿರತವಾಗಿದೆ ಎಂದರು.

ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ 36 ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ದೇಗುಲ ಮಾತ್ರವಲ್ಲದೆ ಚರ್ಚು, ಮಸೀದಿ ನಿರ್ಮಾಣಕ್ಕೂ ಕೈಲಾದ ನೆರವು ನೀಡಿದ್ದೇನೆ. ಇದೆಲ್ಲವನ್ನು ಮಾಡಿದ್ದು ಪರಸ್ಪರ ಸೌಹಾರ್ದತೆಗಾಗಿ ಮತ್ತು ನಾವೆಲ್ಲಾ ಒಂದು ಎಂಬ ಕಾರಣಕ್ಕಾಗಿ. ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಅದಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಕೊಲಾಸೋ ಹೇಳಿದರು.

ಇದೇ ವೇಳೆ ಸಂತ ಜೋಸೇಫ್‌ ವಿಶ್ವವಿದ್ಯಾಲಯ ಸ್ಥಾಪನೆಯ ನಿಟ್ಟಿನಲ್ಲಿ ವಿಧಾನ ಮಂಡಲದಲ್ಲಿ ವಿಧೇಯಕ ಅಂಗೀಕಾರವಾಗಲು ಶ್ರಮಿಸಿದ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವತ್ಥ ನಾರಾಯಣ ಅವರನ್ನು ಕ್ರೈಸ್ತ ಸಮುದಾಯದ ಮುಖಂಡರು ಅಭಿನಂದಿಸಿ ಗೌರವಿಸಿದರು.

ABOUT THE AUTHOR

...view details