ದೇವನಹಳ್ಳಿ :ಕೋವಿಡ್ ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಹಾಗೂ ಸ್ಪರ್ಶಾ ಟ್ರಸ್ಟ್ ವತಿಯಿಂದ ಚಿಣ್ಣರ ಧಾಮ ನಿರ್ಮಾಣ ಮಾಡಲಾಗುತ್ತಿದೆ. ಚಿಣ್ಣರಧಾಮದಲ್ಲಿ 300 ಹೆಣ್ಣು ಮಕ್ಕಳಿಗೆ ಅಶ್ರಯ ಮತ್ತು ವಿದ್ಯಾಭ್ಯಾಸದ ನೆರವು ನೀಡಲು ನಿರ್ಧರಿಸಲಾಗಿದೆ.
ಕಳೆದೆರಡು ವರ್ಷಗಳಿಂದ ಕೋವಿಡ್-19 ದಾಳಿಯಿಂದಾಗಿ ಲಕ್ಷಾಂತರ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಕೂಡ ಇಬ್ಬರೂ ಪೋಷಕರು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಅಂತಹ ಮಕ್ಕಳ ಭವಿಷ್ಯವೀಗ ಆತಂಕದಲ್ಲಿದ್ದು, ಹಣಕಾಸು ನೆರವು, ಮಾನಸಿಕ ಸ್ಥೈರ್ಯ ಈ ಮಕ್ಕಳಿಗೆ ಬೇಕಾಗಿದೆ.
ಈ ದೃಷ್ಟಿಯಿಂದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ದ 300 ಹೆಣ್ಣುಮಕ್ಕಳಿಗೆ 12ನೇ ತರಗತಿವರೆಗೆ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲು ‘ಚಿಣ್ಣರ ಧಾಮ' ಎಂಬ ಸುಸಜ್ಜಿತ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಈ ಧಾಮದಲ್ಲಿ ವಸತಿ, ಕಲಿಕೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ (ಬಿಐಎಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ವಿಭಾಗವಾದ ಕೆಐಎಎಫ್ ಚಿಣ್ಣರ ಧಾಮ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಕೆಐಎಫ್‌ನ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ 'ನಮ್ಮ ಶಿಕ್ಷಣ ' ಅಡಿಯಲ್ಲಿ ಚಿಣ್ಣರ ಧಾಮವನ್ನು ನಿರ್ವಹಿಸಲಾಗುತ್ತದೆ.