ಬೆಂಗಳೂರು:ನಗರದಲ್ಲಿ ಸರಗಳ್ಳರ ಹಾವಳಿ ಮಿತಿಮೀರಿದೆ. ಕಳ್ಳರುರಾಜಾರೋಷವಾಗಿ ಬಂದು ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿರೋ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೃದ್ಧೆಯನ್ನು ನೆಲಕ್ಕೆ ಕೆಡವಿ ಚಿನ್ನದ ಸರ ದೋಚಿದ ಖದೀಮರು! ವಿಡಿಯೋ - ಬೆಂಗಳೂರು ಸರಗಳ್ಳತನ ಸುದ್ದಿ
ಹೆಲ್ಮೆಟ್ ಹಾಕಿ ಪಲ್ಸರ್ ಬೈಕ್‌ನಲ್ಲಿ ಬಂದು ಸರಗಳ್ಳತನ ನಡೆಸುತ್ತಿದ್ದ ಬವೇರಿಯಾ ಹಾಗೂ ಇರಾನಿ ಗ್ಯಾಂಗ್ ಇಷ್ಟು ದಿನ ಇಡೀ ಬೆಂಗಳೂರನ್ನ ನಲುಗಿಸಿತ್ತು. ಆದರೆ, ಇದೀಗ ಮತ್ತೊಂದು ಗ್ಯಾಂಗಿನ ಖದೀಮನೊಬ್ಬ ಹೆಲ್ಮೆಟ್ ಧರಿಸದೇ ರಾಜಾರೋಷಾವಾಗಿ ಬಂದು ವೃದ್ಧೆಯ ಚಿನ್ನದ ಸರ ದೋಚಿರುವ ಪ್ರಕರಣ ಕಾಟನ್‌ಪೇಟೆಯಲ್ಲಿ ನಡೆದಿದೆ.
ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟನ್‌ಪೇಟೆ ನಿವಾಸಿ ಶಾಂತಮ್ಮ ಎಂಬುವರು ಮನೆಯ ಗೇಟ್ ಮುಂದೆ ನಿಂತಿದ್ದರು. ಈ ವೇಳೆ ಅಲ್ಲಿಗೆ ಇಬ್ಬರು ವ್ಯಕ್ತಿಗಳು ಬಂದರು. ಒಬ್ಬ ಹೆಲ್ಮೆಟ್ ಧರಿಸಿದ್ರೆ, ಮತ್ತೊಬ್ಬ ರಾಜಾರೋಷವಾಗಿ ಬಂದಿದ್ದ.ಶಾಂತಮ್ಮ ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಬೈಕ್ ನಿಲ್ಲಿಸಿ ಮೊದಲು ಪರಿಚಿತನಂತೆ ಮಾತನಾಡಿ ತನ್ನತ್ತ ಸೆಳೆದಿದ್ದಾನೆ. ಮೊದಲು ಬೈಕ್‌ನಿಂದ ಈತನನ್ನ ಕೆಳಗಿಳಿಸಿದ್ದ ವ್ಯಕ್ತಿ ಮತ್ತೆ ಅದೇ ಬೈಕ್‌ನಲ್ಲಿ ವಾಪಸ್ ಬಂದಿದ್ದ. ಆಗ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಅದೇ ಬೈಕ್‌ನಲ್ಲಿ ಕಳ್ಳರಿಬ್ಬರೂ ಪರಾರಿಯಾಗಿದ್ದಾರೆ.
ಸರವನ್ನ ಎಳೆಯೋ ಭರದಲ್ಲಿ ವೃದ್ಧೆ ನೆಲಕ್ಕೆ ಬಿದ್ದರೂ ಲೆಕ್ಕಿಸದೆ ಖದೀಮ ಬೈಕ್ ಏರಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.