ಕರ್ನಾಟಕ

karnataka

ETV Bharat / city

ಬಾಲ ಮಂದಿರಗಳಿಂದ ಮಕ್ಕಳು ನಾಪತ್ತೆ ಪ್ರಕರಣ- ವರದಿ ಕೇಳಿದ ಹೈಕೋರ್ಟ್ - Karnataka High Court

ರಾಜ್ಯ ಸರ್ಕಾರದ ಅಧೀನದಲ್ಲಿರುವ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿರುವ ಕುರಿತು ಕೋಲಾರದ ಕೆ.ಸಿ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಮೂರ್ತಿ ರಿತುರಾಜ್​ ಅವಸ್ಥಿ ಹಾಗೂ ನ್ಯಾ.ಎಸ್​.ಆರ್​.ಕೃಷ್ಣಕುಮಾರ್​ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಮಕ್ಕಳು ಕಾಣೆಯಾಗಿರುವ ಅಂಕಿ ಅಂಶದ ಜತೆಗೆ ಮಕ್ಕಳು ನಾಪತ್ತೆಯಾಗದಂತೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಹೈಕೋರ್ಟ್​ ಸರ್ಕಾರಕ್ಕೆ ನಿರ್ದೇಶಸಿದೆ.

high court Of Karnataka
ಕರ್ನಾಟಕ ಉಚ್ಛ ನ್ಯಾಯಾಲಯ

By

Published : Mar 10, 2022, 9:46 AM IST

ಬೆಂಗಳೂರು:ಸರ್ಕಾರದ ಅಧೀನದಲ್ಲಿರುವ ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಹೈಕೋರ್ಟ್​, ಕಾಣೆಯಾಗಿರುವ ಅಂಕಿ - ಅಂಶದ ಜತೆಗೆ ಮಕ್ಕಳು ನಾಪತ್ತೆಯಾಗದಂತೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ರಾಜ್ಯ ಸರ್ಕಾರ 2 ವಾರಗಳ ಕಾಲಾವಕಾಶ ಕೋರಿದೆ. ರಾಜ್ಯ ಸರ್ಕಾರಿ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿರುವ ಕುರಿತು ಕೋಲಾರದ ಕೆ.ಸಿ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಮೂರ್ತಿ ರಿತುರಾಜ್​ ಅವಸ್ಥಿ ಹಾಗೂ ನ್ಯಾ.ಎಸ್​.ಆರ್​.ಕೃಷ್ಣಕುಮಾರ್​ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗಿರುವ ವಿಚಾರವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಹಿತಿ ಕೇಳಲಾಗಿದೆ. ಈ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲು 2 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅಲ್ಲದೇ, ಮಕ್ಕಳು ಕಾಣೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿವರವಾದ ವರದಿ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 29ಕ್ಕೆ ಮುಂದೂಡಿತು.

2015-16ರಿಂದ 2021ರ ಅಕ್ಟೋಬರ್ ನಡುವೆ ರಾಜ್ಯದ ವಿವಿಧ ಸರ್ಕಾರಿ ಬಾಲಮಂದಿರಗಳಿಂದ ಒಟ್ಟು 420 ಮಕ್ಕಳು ಕಾಣೆಯಾಗಿದ್ದಾರೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಆದರೆ, ಇವರಲ್ಲಿ 141 ಮಕ್ಕಳು ಈವರೆಗೆ ಪತ್ತೆಯಾಗಿಲ್ಲ. ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೇ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚುವಂತೆ ಹಾಗೂ ಮಕ್ಕಳ ನಾಪತ್ತೆ ಪ್ರಕರಣಗಳ ತನಿಖೆಗೆ ಬಾಲ ನ್ಯಾಯ ಕಾಯ್ದೆಯ ಅನುಸಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪೊಲೀಸ್ ಘಟಕ ಸ್ಥಾಪಿಸುವುದು ಸೇರಿದಂತೆ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details