ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿಎಂ ಬೊಮ್ಮಾಯಿ ಸೇರಿದಂತೆ ಸಚಿವರುಗಳು ಸಂತಾಪ ಸೂಚಿಸಿದ್ದಾರೆ.
ಬೆಳಗ್ಗೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದರು. ಕೂಡಲೇ ನಾಗರಬಾವಿ ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯದಲ್ಲೇ ಅವರು ನಿಧನರಾದರು ಎಂದು ತಿಳಿದುಬಂದಿದೆ.
ಬೊಮ್ಮಾಯಿ ಗೃಹ ಸಚಿವರಾದಾಗಿಂದಲೂ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದ ಗುರುಲಿಂಗ ಸ್ವಾಮಿ, ಕಳೆದ ಒಂದು ವರ್ಷದಿಂದ ಸಿಎಂ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಪತ್ರಕರ್ತರಾಗಿದ್ದ ಗುರುಲಿಂಗಸ್ವಾಮಿ ಹಲವು ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಸೇವೆ ಸಲ್ಲಿಸಿದ್ದು ಬೆಂಗಳೂರು ಮತ್ತು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಿರಿಯ ವರದಿಗಾರರಾಗಿಯೂ ಕೆಲಸ ಮಾಡಿದ್ದರು.