ಬೆಂಗಳೂರು: ಚೀನಾದ್ದು ಹದ್ದು ಮೀರುವ ನಡವಳಿಕೆಯಾಗಿದೆ. ನಾವು ಶಾಂತಿ ಭಯಸಿದರೆ ಅವರು ಗೊಂದಲವುಂಟು ಮಾಡುತ್ತಿದ್ದಾರೆ. ಚೀನಾಕ್ಕೆ ತಕ್ಕ ಪಾಠ ಕಲಿಸುವ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಸ್ಟಾರ್ಟ್ ಅಪ್ ಯೋಜನೆಯಡಿ ಪರಿಚಯಿಸಿರುವ ಕ್ಯಾರವ್ಯಾನ್ ಮಿನಿ ಟೂರಿಸ್ಟ್ ಬಸ್ಗಳಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಎರಡೂ ದೇಶಗಳ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚಿಸಿದ್ದಾರೆ. ಗೊಂದಲ ಸೃಷ್ಟಿಸುತ್ತಿರುವ ಚೀನಾ ವರ್ತನೆಯಿಂದ ನಮ್ಮ ಯೋಧರು ಪ್ರಾಣ ಕಳೆದುಕೊಂಡಂತಾಗಿದೆ. ಚೀನಾವನ್ನು ಎದುರಿಸುವ ಶಕ್ತಿ ಸಾಮರ್ಥ್ಯ ನಮ್ಮ ದೇಶಕ್ಕೂ ಇದೆ. ಈಗಲಾದರೂ ಚೀನಾ ಎಚ್ಚೆತ್ತುಕೊಂಡು ಸುಮ್ಮನಿದ್ದರೆ ಒಳ್ಳೆಯದು ಎಂದರು.
ಚೀನಾ ವಿರುದ್ಧ ಗುಡುಗಿದ ಸಿಎಂ ಯಡಿಯೂರಪ್ಪ ಸಿ.ಟಿ.ರವಿ ಕಿಡಿ
ಚೀನಾ ಕಾಲು ಕೆರೆದು ಜಗಳ ಮಾಡುತ್ತಿದೆ. ಚೀನಾ ದೇಶ ವಿಶ್ವಾಸಾರ್ಹ ಅಲ್ಲ ಅನ್ನೋದನ್ನು ಮತ್ತೆ ಮತ್ತೆ ಸಾಬೀತಾಗಿದೆ. ಗಾಂಧೀಜಿ ಅವರ ಸ್ವದೇಶಿ ಮಂತ್ರದ ಅಳವಡಿಕೆಗೆ ನಾವು ಮುಂದಾಗಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಪ್ರತಿಯೊಬ್ಬ ಭಾರತೀಯನೂ ಯೋಧನ ರೀತಿ ಯೋಚಿಸಬೇಕು. ಆಗ ಭಾರತೀಯ ಯೋಧರ ಬಲಿದಾನ ಸಾರ್ಥಕವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ಕಾಂಗ್ರೆಸ್ನವರು ಪ್ರಧಾನಿ ಅವರ ಮೌನದ ಬಗ್ಗೆ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆ ಅವರೇ ನಾಚಿಕೆ ಪಟ್ಟುಕೊಳ್ಳಬೇಕಾದ ವಿಚಾರ. ಇಡೀ ದೇಶ ಒಂದಾಗಿ ಯೋಚಿಸುತ್ತಿರುವಾಗ ಕಾಂಗ್ರೆಸ್ ಇಷ್ಟು ಕೆಳ ಮಟ್ಟಕ್ಕೆ ಇಳಿಯತ್ತದೆ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಈಗ ರಾಜಕೀಯ ಮಾಡಿದರೆ, ಹಿಂದೆ ಹಿಂದಿ ಚೀನಿ ಭಾಯಿ ಭಾಯಿ ಅಂತ ಹೇಳಿದ್ದರ ಬಗ್ಗೆಯೂ ಮಾತಾಡಬೇಕಾಗುತ್ತದೆ. ಚೀನಾ ಸೈನ್ಯದಲ್ಲಿ ನಮಗಿಂತ ಬಲ ಇರಬಹುದು. ಆದರೆ, ಆತ್ಮ ವಿಶ್ವಾಸದಲ್ಲಿ ಭಾರತ ಅವರಿಗಿಂತ ಬಲಶಾಲಿ. ಆತ್ಮವಿಶ್ವಾಸ ಕುಗ್ಗಿಸುವ ಹೇಳಿಕೆಗಳು ದೇಶ ವಿರೋಧಿಯಾಗಲಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ
ಕ್ಯಾರವ್ಯಾನ್ ಉದ್ಘಾಟಿಸಿದ ಸಿಎಂ, ಕೋವಿಡ್ನಿಂದಾಗಿ ಪ್ರವಾಸೋದ್ಯಮ ಕುಸಿತಗೊಂಡಿದೆ. ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಶೇ.14 ರಷ್ಟಿದೆ. ಹಂಪಿ, ಕೊಡಗು ಸೇರಿದಂತೆ ರಾಜ್ಯದ ಹಲವು ಸ್ಥಳಗಳಿಗೆ ಕ್ಯಾರವ್ಯಾನ್ ನಿಯೋಜನೆ ಮಾಡಲಾಗುತ್ತದೆ ಎಂದರು.
ಕ್ಯಾರವ್ಯಾನ್ ವೀಕ್ಷಿಸಿದ ಮುಖ್ಯಮಂತ್ರಿ ಕೊರೊನಾದಿಂದಾಗಿ ಪ್ರವಾಸೋದ್ಯಮಕ್ಕೆ 15 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಕೋವಿಡ್ ನಂತರ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ. ಬಾತ್ ರೂಂ, ಶೌಚಾಲಯದ ವ್ಯವಸ್ಥೆ, ಬೆಡ್ ವ್ಯವಸ್ಥೆಗಳುಳ್ಳ ಐಶಾರಾಮಿ ಕ್ಯಾರವ್ಯಾನ್ ಮಿನಿ ಬಸ್ ಇವುಗಳಾಗಿದ್ದು, ಕುಂಟುಂಬ ಸಮೇತ ಬಸ್ನಲ್ಲಿ ಪ್ರವಾಸ ಮಾಡಬಹುದು ಎಂದರು.
ಸಿ.ಟಿ ರವಿ ಮಾತನಾಡಿ, ಕ್ಯಾರವ್ಯಾನ್ ಟೂರಿಸ್ಟ್ ಬಸ್ಗಳಿಗೆ ಸರ್ಕಾರಿ ಸಹಭಾಗಿತ್ವ ಇಲ್ಲ. ಪ್ರಾಥಮಿಕ ಹಂತದಲ್ಲಿ ಅವರ ಬೆಳವಣಿಗೆಗೆ ಪೂರಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಯಾರವ್ಯಾನ್ ಟೂರಿಸಂಗೆ ಉತ್ತೇಜನ ಪ್ರವಾಸೋದ್ಯಮಕ್ಕೆ ಹಲವು ರೀತಿಯಲ್ಲಿದೆ. ಮಧ್ಯಮ ವರ್ಗ, ಬಡವರಿಗೂ ಬೇರೆ ಪ್ರವಾಸೋದ್ಯಮ ಇದೆ. ಶ್ರೀಮಂತರಿಗೆ ಬೇರೆ ಇದೆ. ಅವರವರ ಜೇಬಿಗೆ ತಕ್ಕಂತೆ ಪ್ರವಾಸೋದ್ಯಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.