ಬೆಂಗಳೂರು:ಕೊರೊನಾ ರೋಗಿಗಳಿಗೆ ನೀಡುವ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ. ತನಿಖೆ ನಡೆಸಿದರೆ ಏನಾಗಲಿದೆ ಗೊತ್ತಾ? ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟಕ್ಕೆ ಸಿಎಂ ಗರಂ ಅಧಿಕೃತ ನಿವಾಸ ಕಾವೇರಿಯಲ್ಲಿ ತುರ್ತು ಸಭೆ ಆರಂಭಗೊಳ್ಳುತ್ತಿದ್ದಂತೆ ರೆಮ್‌ಡಿಸಿವಿರ್ ದುರುಪಯೋಗ ಕುರಿತು ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದುಕೊಂಡರು. ಆದರೆ, ಅಧಿಕಾರಿಗಳು ವಿಜಯಪುರದಲ್ಲಿ 1 ಎಫ್ಐಆರ್, ಮತ್ತೊಂದು ಆಸ್ಪತ್ರೆ ವಿರುದ್ಧ ಎಫ್ಐಆರ್, ಆಕ್ಸಿಜನ್ ಮಾರಾಟದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ನೀಡಿದರು.
ಅಧಿಕಾರಿಗಳ ವಿವರಣೆಗೆ ಕೆರಳಿದ ಸಿಎಂ, ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟವಾಗುತ್ತಿದೆ. ಹೊರ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ವರದಿ ನಮ್ಮ ಬಳಿ ಇದೆ. ಎಲ್ಲವನ್ನು ಮುಚ್ಚಿಟ್ಟುಕೊಂಡು ಅಧಿಕಾರಿಗಳು ಮಾತನಾಡಬಾರದು. ಇದರ ಬಗ್ಗೆ ಸಮಗ್ರವಾದ ತನಿಖೆ ಮಾಡುತ್ತೇನೆ. ಪರಿಣಾಮ ಬಹಳ ಕೆಟ್ಟದಾಗಿರಲಿದೆ, ಎಲ್ಲರೂ ಇದನ್ನು ಎದುರಿಸಬೇಕಿದೆ ಎಂದರು.
ನಾವು ಕೋವಿಡ್ ಸಂಕಷ್ಟದ ಕಾಲದಲ್ಲಿದ್ದೇವೆ. ಆದರೆ, ಬ್ಲಾಕ್ ಮಾರ್ಕೆಟ್ನಲ್ಲಿ ರೆಮ್‌ಡಿಸಿವಿರ್ ಮಾರಾಟ ಮಾಡಿ ಔಷಧಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾರೋ ಒಬ್ಬರ ಬಗ್ಗೆ ನಾನು ಮಾತನಾಡಲ್ಲ. ಸರ್ಕಾರದಿಂದಲೇ ರೆಮ್‌ಡಿಸಿವಿರ್ ಸರಬರಾಜು ಆಗಬೇಕು. ಆದರೂ ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತದೆ ಎಂದರೆ ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದೇ ಅರ್ಥ. ತನಿಖೆ ಮಾಡಿದರೆ ಎಲ್ಲವೂ ಹೊರಗಡೆ ಬರಲಿದ್ದು, ಅದರ ಪರಿಣಾಮವನ್ನು ಎದುರಿಸಬೇಕಿದೆ. ವಾಸ್ತವ ಸಂಗತಿಯನ್ನು ಮುಚ್ಚಿಟ್ಟುಕೊಂಡು ಮಾತನಾಡಬೇಡಿ ಎಂದು ತಾಕೀತು ಮಾಡಿದರು.
ಸಿಎಂ ಗರಂ ಆಗುತ್ತಿದ್ದಂತೆ ಬೆದರಿದ ಅಧಿಕಾರಿಗಳು, ಬಹಳ ಕಷ್ಟಪಟ್ಟು ನಮ್ಮೆಲ್ಲಾ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದಕ್ಕೂ ಕಿಡಿಕಾರಿದ ಸಿಎಂ, ಬರೀ ಕೆಲಸ ಮಾಡುವುದು ಮುಖ್ಯವಲ್ಲ. ಔಷಧಿ ನಮಗೆ ಕೊರತೆಯಿರುವ ಸಂದರ್ಭದಲ್ಲಿ ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟವಾಗುತ್ತಿದೆ ಎಂದರೆ ಇದರ ತನಿಖೆ ಮಾಡಿದರೆ ಏನು ಪರಿಣಾಮವಾಗಲಿದೆ ಗೊತ್ತಾ? ತನಿಖೆ ಮಾಡಿಸುತ್ತೇನೆ, ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪರಿಣಾಮ ಎದುರಿಸಿ ಎಂದು ಎಚ್ಚರಿಕೆ ನೀಡಿದರು.
ತುರ್ತು ಸಭೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ:ಬೆಂಗಳೂರು: ವಾರದ ಹಿಂದಷ್ಟೇ ಮದುವೆ... ರಾತ್ರಿ ಮಲಗಿ ಬೆಳಗಾಗುವುದರಲ್ಲಿ ವ್ಯಕ್ತಿ ಕೊರೊನಾಗೆ ಬಲಿ!