ಬೆಂಗಳೂರು: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಪ್ರಿಲ್ 23ರಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಉಪ ಚುನಾವಣಾ ಪ್ರಚಾರದ ವೇಳೆ ಜ್ವರ ಕಾಣಿಸಿಕೊಂಡಿದ್ದ ಬಿಎಸ್ವೈಗೆ, ಪರೀಕ್ಷೆ ವೇಳೆ ಕೋವಿಡ್ ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಪ್ರಿಲ್ 16ರಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊರೊನಾ ದೃಢಪಟ್ಟಿದ್ದು, ಅಂದೇ ಅವರನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ವೈದ್ಯಕೀಯ ತಂಡ ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್-19 ಪ್ರೋಟೋಕಾಲ್ ಪ್ರಕಾರ, ಪ್ರತಿ ದಿನ ಮೂರು ಬಾರಿ ವೈದ್ಯಕೀಯ ತಪಾಸಣೆ ನಡೆಸುತ್ತಿದೆ. ಸಿಎಂ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹರ್ಷಚಿತ್ತರಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಕಳೆದ ಮೂರು ದಿನದಿಂದ ಪ್ರತಿ ದಿನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡುತ್ತಿದೆ.
ಸಿಎಂ ಆಸ್ಪತ್ರೆಗೆ ದಾಖಲಾಗಿ ಇಂದಿಗೆ ನಾಲ್ಕು ದಿನಗಳಾಗಿದ್ದು, ಇನ್ನೆರಡು ದಿನದಲ್ಲಿ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ವರದಿ ನೆಗೆಟಿವ್ ಬಂದಲ್ಲಿ ಏಪ್ರಿಲ್ 23ರ ಶುಕ್ರವಾರದಂದು ಸಿಎಂ ಯಡಿಯೂರಪ್ಪ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.