ಬೆಂಗಳೂರು : ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಧಾನಸೌಧ ಒಳಗೊಂಡಂತೆ ಸುತ್ತಮುತ್ತಲ ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ವಿಶೇಷ ಟ್ರಾಫಿಕ್ ವಲಯ’ವನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಗಮ ಸುರಕ್ಷಾ ಸಂಚಾರಕ್ಕಾಗಿ ತಂತ್ರಜ್ಞಾನಾಧಾರಿತ ಸೌಲಭ್ಯಗಳು ಮತ್ತು ಸಂಚಾರ ಬೀಟ್ ವ್ಯವಸ್ಥೆ ಹಾಗೂ ಸಂಚಾರ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ವಿಧಾನಸೌಧ ಒಳಗೊಂಡಂತೆ ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್‌ನಲ್ಲಿ ಮಾದರಿ ವಿಶೇಷ ಟ್ರಾಫಿಕ್ ವಲಯ ರೂಪಿಸಲಾಗುವುದು ಎಂದರು.
ಈ ವಿಶೇಷ ಟ್ರಾಫಿಕ್ ವಲಯದಲ್ಲಿ ವಿಶೇಷ ರಸ್ತೆಗಳು, ಪಾರ್ಕಿಂಗ್ ಸೌಲಭ್ಯ, ಪಾದಚಾರಿ ಮಾರ್ಗ, ಅಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ಸಿಗ್ನಲ್, ಸಂಚಾರ ಪೊಲೀಸರಿಗೆ ವಿಶೇಷ ಸಮವಸ್ತ್ರ, ಬಾಡಿವಾರ್ನ್ ಕ್ಯಾಮರಾ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಯಾಮೆರಾ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇನ್ನೂ ಆರು ವಿಶೇಷ ಟ್ರಾಫಿಕ್ ವಲಯ ರೂಪಿಸಲಾಗುವುದು ಎಂದು ಹೇಳಿದರು.
ತಂತ್ರಜ್ಞಾನ ಅಗತ್ಯ : ಪೊಲೀಸ್ ಇಲಾಖೆಗೆ ತಂತ್ರಜ್ಞಾನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಬೆಂಗಳೂರು ನಗರದಲ್ಲಿ ದಿನ ಹುಟ್ಟುವ ಶಿಶುಗಳಿಗಿಂತ ಅಧಿಕ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ದಿನಕ್ಕೆ ಐದು ಸಾವಿರ ದ್ವಿಚಕ್ರವಾಹನಗಳು ಹಾಗೂ ಮೂರು ಸಾವಿರ ದೊಡ್ಡ ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ಹಾಗಾಗಿ, ಎಂತಹ ಗುಣಮಟ್ಟದ ರಸ್ತೆಗಳನ್ನು ಮಾಡಿದರೂ ಉಳಿಯುವುದಿಲ್ಲ. ಹೀಗಾಗಿ ನಗರದಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆಯಿರುವ 12 ಕಾರಿಡಾರ್‌ಗಳನ್ನು ಗುರುತಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಆಧುನಿಕ ಸೌಲಭ್ಯಗಳು ಬಂದಾಗ ಹೊಸ ಸವಾಲುಗಳು ಎದುರಾಗುತ್ತವೆ. ಹೀಗಾಗಿ ತಂತ್ರಜ್ಞಾನ ಅಳವಡಿಸಿಕೊಂಡ ಬಳಿಕ ಎದುರಾಗುವ ಹೊಸ ಸವಾಲು ಎದುರಿಸಲು ಸಿದ್ಧರಿರಬೇಕು. ಸಂಚಾರ ಪೊಲೀಸ್ ವಿಭಾಗದ ಕಂಟ್ರೋಲ್ ರೂಂ ಮತ್ತಷ್ಟು ಬಲಗೊಳಿಸಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
16 ಸಾವಿರ ಪೊಲೀಸರ ನೇಮಕ : ಪೊಲೀಸ್ ವ್ಯವಸ್ಥೆ ಇಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಸಮಾಜ ಹಾಗೂ ಸರ್ಕಾರ ಪೊಲೀಸರಿಗೆ ಗೌರವ ಕೊಡಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಹಂತದಲ್ಲಿ ಪೊಲೀಸರಿಗೆ 10,475 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಎರಡನೇ ಹಂತಕ್ಕೂ ಶೀಘ್ರದಲ್ಲೇ ಅನುಮತಿ ನೀಡಲಾಗುವುದು. ಮುಂದಿನ ವರ್ಷದೊಳಗೆ 16 ಸಾವಿರ ಪೊಲೀಸರ ನೇಮಕಾತಿ ಮುಗಿಸಲಾಗುವುದು. ಇನ್ನು ರಾಜ್ಯದಲ್ಲಿ ಆರು ಎಫ್‌ಎಸ್‌ಎಲ್ ಲ್ಯಾಬ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಲ್ಯಾಬ್ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಉಳಿದ ನಾಲ್ಕು ಲ್ಯಾಬ್‌ಗಳನ್ನು ಶೀಘ್ರದಲ್ಲೇ ಸ್ಥಾಪಿಸುವುದಾಗಿ ಹೇಳಿದರು.