ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಕಾಂಗ್ರೆಸ್ ನಿರಾಧಾರ ಆರೋಪ ಮಾಡಿದ್ದು, ತಮ್ಮ ಪಕ್ಷದವರ ಬಣ್ಣ ಬಯಲಾಗಲಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹಿಟ್ ಆ್ಯಂಡ್ ರನ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಆರ್ ಟಿ ನಗರದ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಯಾವ ಯಾವ ದೂರುಗಳು ಬರುತ್ತವೆಯೋ?, ಯಾರು ಕೊಡುತ್ತಾರೋ ಅವೆಲ್ಲವನ್ನೂ ಪರಿಗಣಿಸುತ್ತೇವೆ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಅದರ ತನಿಖೆಯನ್ನೂ ಮಾಡಿಸುತ್ತೇವೆ. ಅಕ್ರಮದಲ್ಲಿ ಸಹಕಾರ, ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದರು.
ನಾವು ಈ ಪ್ರಕರಣದ ತನಿಖೆ ವಿಚಾರದಲ್ಲಿ ಮುಕ್ತವಾಗಿದ್ದೇವೆ. ನಿಷ್ಪಕ್ಷಪಾತವಾಗಿ ನಿಷ್ಟುರವಾಗಿ ತನಿಖೆಯಾಗಬೇಕು ಎಂದು ಸೂಚಿಸಿದ್ದೇವೆ. ಹಲವಾರು ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಕಲಬುರಗಿಯ ದಿವ್ಯ ಹಾಗರಗಿ ಮಾತ್ರವಲ್ಲ, ಇನ್ನೂ ಹಲವರಿದ್ದಾರೆ. ಎಲ್ಲರನ್ನೂ ಬಂಧಿಸುತ್ತೇವೆ ಎಂದು ಸಿಎಂ ಖಡಕ್ ಸಂದೇಶ ರವಾನಿಸಿದರು.
ಸಚಿವ ಅಶ್ವತ್ಥ್ ನಾರಾಯಣ್ ಬಗ್ಗೆ ಕಾಂಗ್ರೆಸ್ನವರು ಆಧಾರ ರಹಿತವಾದ ಆರೋಪ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಪ್ರತಿ ಪಕ್ಷವದರು ಬೇರೆಯವರ ಮೇಲೆ ಆರೋಪ ಮಾಡುವಾಗ ಸಾಕ್ಷಿ ಇರಬೇಕು ಎನ್ನುವುದು ಇವರಿಗೆ ತಿಳಿದಿಲ್ಲ. ಇವರು ಹಿಟ್-ಆ್ಯಂಡ್-ರನ್ ಮಾಡಲು ಹೊರಟಿದ್ದಾರೆ. ಇದು ನಡೆಯುವುದಿಲ್ಲ, ಅವರ ಕಾಲದಲ್ಲಿ ಸಾಕಷ್ಟು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು. ಹಲವಾರು ಬಾರಿ ಪಿಎಸ್‌ಐ, ಪಿಯುಸಿ ಎಲ್ಲಾ ಪ್ರಶ್ನೆ ಪತ್ರಿಕೆ ಹೊರಗೆ ಬಂದಿದ್ದವು. ಆಗ ಅವರು ಏನೂ ಕ್ರಮ ಕೈಗೊಂಡಿರಲಿಲ್ಲ. ಈಗ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಬಂಧಿತರಲ್ಲಿ ಕೆಲವರು ಅವರ ಪಕ್ಷದವರು. ಅವರ ಕಡೆಯವರು ಬಂಧನಕ್ಕೆ ಒಳಗಾಗಿದ್ದಾರೆ, ಅವರ ಮುಖಾಂತರ ಇವರ ಬಣ್ಣ ಬಯಲಾಗಲಿದೆ ಎಂದು ಈ ರೀತಿ ಆರೋಪ ಮಾಡುತ್ತಿದ್ದಾರೆ. ಜನ ಇದನ್ನೆಲ್ಲ ಒಪ್ಪುವುದಿಲ್ಲ, ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಾಗಿ, ಅವರ ಮಾತಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಸಿಎಂ ತಿರುಗೇಟು ನೀಡಿದರು.
ಇದನ್ನೂ ಓದಿ:ಪಿಎಸ್‌ಐ ಅಕ್ರಮ: ಡಿವೈಎಸ್ಪಿ ವಿಚಾರಣೆ, ಮತ್ತೊಬ್ಬ ಕಾನ್ಸ್ಟೇಬಲ್ ಬಂಧನ