ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು ವಿವಿಧೆಡೆ ಮಳೆಯಾಗಿದ್ದು, ಇನ್ನೂ ಮೂರು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಂಬಂಧ ರಸ್ತೆ, ಜಂಕ್ಷನ್ಗಳಲ್ಲಿ ಮಳೆ ನೀರು ನಿಂತಿರುವುದು ಅಥವಾ ಮರಗಳು ಬಿದ್ದಿರುವ ದೂರುಗಳು ಬಂದ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುರಿದ ಮಳೆಯ ನಂತರ ವರ್ಚುವಲ್ ಮೂಲಕ ನಡೆದ ತುರ್ತು ಸಭೆ ಉದ್ದೇಶಿಸಿ ಮಾತನಾಡಿ, ನಗರದಲ್ಲಿ ಮಳೆಯಾದ ವೇಳೆ ನಾಗರಿಕರಿಗೆ ಯಾವುದೇ ಸಮಸ್ಯೆ ಆಗಬಾರದು. ಎಲ್ಲೆಲ್ಲಿ ನೀರು ನಿಂತಿದೆ ಹಾಗೂ ಮರಗಳು ಅಥವಾ ಮರದ ರೆಂಬೆಗಳು ಬಿದ್ದಿವೆಯೋ ಅಂತಹ ಸ್ಥಳಕ್ಕೆ ಪಾಲಿಕೆ ತಂಡವು ಕೂಡಲೇ ತೆರಳಿ ಇರುವ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ದೂರು ಬಂದ ತಕ್ಷಣ ಕ್ರಮಕ್ಕೆ ಆದೇಶ: ನಗರದಲ್ಲಿ ಜೋರು ಮಳೆಯಾದರೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಜೊತೆಗೆ ಕಂದಾಯ, ಆರೋಗ್ಯ, ಘನತ್ಯಾಜ್ಯ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳನ್ನು ಸಹ ಬಳಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ. ಯಾವ ಜಾಗದಲ್ಲಿ ನೀರು ನಿಲ್ಲುತ್ತದೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಮತ್ತೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ. ಸಾರ್ವಜನಿಕರು ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಿದ ಕೂಡಲೇ ದೂರು ಬಂದಿರುವ ಸ್ಥಳಕ್ಕೆ ಪಾಲಿಕೆಯ ತಂಡ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ಎಲ್ಲಾ ವಲಯ ವಿಶೇಷ ಆಯುಕ್ತರು, ವಲಯ ಜಂಟಿ ಆಯುಕ್ತರು, ಎಲ್ಲಾ ವಲಯ ಮುಖ್ಯ ಇಂಜಿನಿಯರ್ಗಳು, ರಸ್ತೆ ಮೂಲಭೂತ ಸೌಕರ್ಯ ಅಥವಾ ಯೋಜನಾ ವಿಭಾಗದ ಮತ್ತು ಬೃಹತ್ ನೀರು ಕಾಲುವೆ ವಿಭಾಗದ ಮುಖ್ಯ ಇಂಜಿನಿಯರ್ಗಳು, ಕಾರ್ಯಪಾಲಕ ಇಂಜಿನಿಯರ್ಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಸುಡು ಬಿಸಿಲಿನಿಂದ 'ಬೆಂದ'ಕಾಳೂರಿಗೆ ತಂಪೆರೆದ ವರುಣ