ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ (Legislative council election) ಬೆಂಗಳೂರು ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚೇತನ್ ಗೌಡ ಕಣಕ್ಕಿಳಿಯಲಿದ್ದಾರೆ.
ವಿಧಾನ ಪರಿಷತ್ನಲ್ಲಿ ತೆರವಾಗುತ್ತಿರುವ 25 ಸ್ಥಾನಗಳಿಗೆ ಡಿಸೆಂಬರ್ 10ಕ್ಕೆ ಚುನಾವಣೆ ನಡೆಯಲಿದ್ದು, 14 ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 25 ಸ್ಥಾನಗಳ ಪೈಕಿ ಕಾಂಗ್ರೆಸ್ನ 13 ಸ್ಥಾನಗಳು ತೆರವಾಗುತ್ತಿದೆ. ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಎನ್ ನಾರಾಯಣಸ್ವಾಮಿ ಇನ್ನೊಂದು ಅವಧಿಗೆ ಸ್ಪರ್ಧಿಸಲು ಹಿಂದೇಟು ಹಾಕಿರುವ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟ ನಡೆಸಿತ್ತು. ಒಕ್ಕಲಿಗರ ಪ್ರಾಬಲ್ಯ ಇರುವ ಮಹಾನಗರದ ಸ್ಥಳೀಯ ಸಂಸ್ಥೆಗೆ ಅಭ್ಯರ್ಥಿಯಾಗಿ ಯಲಹಂಕ ಮೂಲದ ಚೇತನ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಅಧಿಕೃತ ಘೋಷಣೆ ಬಾಕಿ..
ಬೆಂಗಳೂರು ನಗರ ವ್ಯಾಪ್ತಿಯ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚೇತನ್ ಗೌಡ ಅಭ್ಯರ್ಥಿಯಾಗುವುದು ಖಚಿತವಾಗಿದೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ತಮ್ಮನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕಾಗಿ ಇಂದು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ರಾಮಲಿಂಗಾರೆಡ್ಡಿ ಅವರಿಗೆ ಚೇತನ್ ಗೌಡ ಅಭಿನಂದಿಸಿದ್ದಾರೆ.
ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ನಾಯಕರು ಆಯ್ಕೆಯಾಗಿದ್ದು, ಇವರ ಒಲವು ಗಳಿಸುವುದು ಚೇತನ್ ಗೌಡಗೆ ಸುಲಭವಾಗಲಿದೆ ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಒಮ್ಮತದಿಂದ ಚೇತನ್ ಗೌಡರನ್ನು ಆಯ್ಕೆ ಮಾಡಿದ್ದಾರೆ. ಯುವ ನಾಯಕರಾಗಿರುವ ಚೇತನ್ ಯಲಹಂಕ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಎನ್ ನಾರಾಯಣಸ್ವಾಮಿ ಅವರಿಂದ ತೆರವಾಗುವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಅಧ್ಯಕ್ಷರ ನೇಮಕ ಅಸಿಂಧುಗೊಳಿಸಿದ ಹೈಕೋರ್ಟ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಒಮ್ಮತದಿಂದ ಆಯ್ಕೆ ಮಾಡಿದ್ದು, ಇವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.