ಬೆಂಗಳೂರು: ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇ. ಧ್ಯಾನ್ ಚಂದ್ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ದೇಶಾದ್ಯಂತ ಹಲವರು ತಮ್ಮದೇ ಆದ ಅಭಿಪ್ರಾಯ ಮತ್ತು ಒತ್ತಾಯಗಳನ್ನು ಮಾಡುತ್ತಿದ್ದಾರೆ. ಇದೀಗ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವಂತೆ ನಾನು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕನ್ನಡಿಗರು ತಿಂಡಿ ಸೇವಿಸುವ ವೇಳೆ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ನೆನಪಿಸುವ ಅಗತ್ಯ ಇಲ್ಲ. ನಿನ್ನೆ ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಧ್ಯಾನ್ ಚಂದ್ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಹಿನ್ನೆಲೆ ಸಿ.ಟಿ. ರವಿ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ ಹೆಸರನ್ನೂ ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೊಂಡಿದ್ದ ಕ್ಯಾಂಟೀನ್ಗೆ ಇಂದಿರಾ ಗಾಂಧಿ ಹೆಸರು ಇಡಲಾಗಿತ್ತು. ಸರ್ಕಾರಿ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಗಾಂಧಿ ಕುಟುಂಬದವರ ಹೆಸರಿಟ್ಟಿರುವ ವಿಚಾರ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಸಿ.ಟಿ. ರವಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಯಾರೂ ಯಾವ ಖಾತೆಗೂ ಪಟ್ಟು ಹಿಡಿದಿಲ್ಲ ಎಂದ ಸಿಎಂ.. ಸಚಿವರ ಖಾತೆ ಪಟ್ಟಿ ಪ್ರಕಟಣೆಗೆ ಕ್ಷಣಗಣನೆ