ಕರ್ನಾಟಕ

karnataka

ETV Bharat / city

ಬಾಂಗ್ಲಾದ ಮುಸಲ್ಮಾನರು ಹಿಂದೂಗಳೊಡನೆ ನಡೆದುಕೊಳ್ಳುತ್ತಿರುವ ರೀತಿ ಭಯ ಹುಟ್ಟಿಸುತ್ತಿದೆ: ಸೂಲಿಬೆಲೆ

ಬಾಂಗ್ಲಾದೇಶದಲ್ಲಿ ಹಿಂದೂಗಳು ಈಗ ಅಕ್ಷರಶಃ ಒಂಟಿಯಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ನಿಮ್ಮೊಡನೆ ನಾವಿದ್ದೇವೆ ಎಂದು ಕೂಗಿ ಹೇಳುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿಯೇ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ, ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

protest against  violence in bangladesh
ಶಾಂತಿಯುತ ಪ್ರತಿಭಟನೆ - ಪಂಜಿನ ಮೆರವಣಿಗೆ

By

Published : Oct 24, 2021, 10:11 AM IST

ಬೆಂಗಳೂರು: ಭಾರತದಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಾದರೂ ಅತ್ಯಂತ ಪ್ರೀತಿಯಿಂದ ಕಾಣಲಾಗುತ್ತದೆ. ಆದರೆ, ಬಾಂಗ್ಲಾದ ಮುಸಲ್ಮಾನ ಸಮಾಜ ಇಂದು ಹಿಂದೂಗಳೊಡನೆ ನಡೆದುಕೊಳ್ಳುತ್ತಿರುವ ರೀತಿ ನೋಡಿದ್ರೆ ಎಂಥವರಿಗೂ ಅಸಹ್ಯ, ಹೆದರಿಕೆ ಹುಟ್ಟಿಸುತ್ತದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಳವಳ ವ್ಯಕ್ತಪಡಿಸಿದರು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆಯ ಅಂಗವಾಗಿ, ನಗರದ ಇಸ್ಕಾನ್ ಬಳಿ ಶನಿವಾರ ಸಂಜೆಯಿಂದ ರಾತ್ರಿಯವರೆಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಹಿಂದೂಗಳ ಮೇಲೆ ದೌರ್ಜನ್ಯ:

ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಬಾಂಗ್ಲಾದೇಶ 1947ರವರೆಗೂ ಭಾರತದ್ದೇ ಅಂಗವಾಗಿದ್ದ ನಾಡು. ಸ್ವಾತಂತ್ರ್ಯಾನಂತರ ನಮ್ಮಿಂದ ಬೇರ್ಪಟ್ಟ ಬಳಿಕವೂ, ಪೂರ್ವ ಪಾಕಿಸ್ತಾನ ಎಂದು ಕರೆದುಕೊಂಡು ಸದಾ ಭಾರತದೊಡನೆ ಸಮರಸದಿಂದಲೇ ಇದ್ದ ರಾಷ್ಟ್ರ. ಪಶ್ಚಿಮ ಪಾಕಿಸ್ತಾನದೊಡನೆ ಅದಕ್ಕೆ ಕಿರಿಕಿರಿಯಾದಾಗ, ಆದನ್ನು ಎದುರಿಸಿ, ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶವಾಗಲು ಸಹಕರಿಸಿದ್ದೂ ಭಾರತವೇ. ಕೊರೊನಾ ಸಮಯದಲ್ಲಿ ಭಾರತ ಬಾಂಗ್ಲಾದೇಶಕ್ಕೆ ಲಸಿಕೆ ರಫ್ತು ಮಾಡಿದ್ದಲ್ಲದೇ, 1.2 ಮಿಲಿಯನ್‌ನಷ್ಟು ಉಚಿತ ಡೋಸ್‌ಗಳನ್ನೂ ನೀಡಿತ್ತು. ಹೀಗೆ ಭಾರತ ಪ್ರತೀ ಬಾರಿ ಬಾಂಗ್ಲಾದ ಜನರ ನೋವಿಗೆ ಸ್ಪಂದಿಸುವ ಕಾರ್ಯವನ್ನು ದಶಕಗಳಿಂದಲೂ ಮಾಡಿಕೊಂಡು ಬಂದಿದೆ. ಆದರೆ, ಈಗ ಬಾಂಗ್ಲಾದ ಬಹುಸಂಖ್ಯಾತ ಮುಸಲ್ಮಾನರು ಸದಾ ಜೊತೆಯಲ್ಲಿದ್ದ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು.

ಕೋಮುಗಲಭೆ ಹುಟ್ಟುಹಾಕಿದರು:

ಹಿಂದೂಗಳ ಹಬ್ಬ ದಸರಾ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಪವಿತ್ರ ದುರ್ಗಾಮೂರ್ತಿಯ ವಿಗ್ರಹವನ್ನು ಒಡೆದು ನದಿಗೆಸೆದು ಕೋಮುಗಲಭೆ ಹುಟ್ಟುಹಾಕಿದರು. ಮತಾಂಧ ಮುಸಲ್ಮಾನರು ಕಂಡ-ಕಂಡಲ್ಲಿ ಹಿಂದೂಗಳ ಹತ್ಯೆ ಮಾಡುತ್ತಿದ್ದಾರೆ. ಪುಟ್ಟಪುಟ್ಟ ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರವೆಸಗುತ್ತಿದ್ದಾರೆ. ಹಿಂದೂಗಳು ವಾಸವಿರುವ ಹಳ್ಳಿ ಪೀರಗಂಜ್, ರಂಗ್‌ಪುರ್‌ಗಳಲ್ಲಿ ಮನೆಗಳನ್ನು ಲೂಟಿಗೈದು, ಹಳ್ಳಿ-ಹಳ್ಳಿಗೇನೇ ಬೆಂಕಿ ಇಟ್ಟಿದ್ದಾರೆ. ಬೇರೆ-ಬೇರೆ ಪ್ರದೇಶಗಳಲ್ಲಿರುವ ಇಸ್ಕಾನ್ ಮೇಲೆ ದಾಳಿಗೈದು, ಪ್ರಭುಪಾದರ ಮೂರ್ತಿಯನ್ನು ಸುಟ್ಟುಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ - ಪಂಜಿನ ಮೆರವಣಿಗೆ:

ಬಾಂಗ್ಲಾದೇಶದಲ್ಲಿ ಹಿಂದೂಗಳು ಈಗ ಅಕ್ಷರಶಃ ಒಂಟಿಯಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ನಿಮ್ಮೊಡನೆ ನಾವಿದ್ದೇವೆ ಎಂದು ಕೂಗಿ ಹೇಳುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿಯೇ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ, ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್​

ABOUT THE AUTHOR

...view details