ಬೆಂಗಳೂರು: ತೆಂಗಿನಕಾಯಿ ಕೀಳುವ ಸೋಗಿನಲ್ಲಿ ಬಂದು ವೃದ್ಧೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಸರಗಳ್ಳತನ ಮಾಡಿದ್ದ ಆರೋಪಿಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ಸಭಾಪತಿ ಬಂಧಿತ ಆರೋಪಿ. ಕಳೆದ 10 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದ ಈತ ಗಾರೆ ಕೆಲಸ, ತೆಂಗಿನ ಕಾಯಿ ಕೀಳುವುದು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಆರೋಪಿಗೆ ಮಲ್ಲೇಶ್ವರಂ ನಿವಾಸಿ ವೃದ್ಧೆ ನಳಿನಾ ನಾಗರಾಜ್ ಎಂಬುವವರ ಪರಿಚಯವಾಗಿದೆ. ಮೂರು ತಿಂಗಳ ಹಿಂದೆ ವೃದ್ಧೆಯ ಮನೆ ಆವರಣದಲ್ಲಿ ತೆಂಗಿನ ಕಾಯಿ ಕಿತ್ತುಕೊಟ್ಟಿದ್ದ ಈತ ಅಜ್ಜಿಯೊಂದಿಗೆ ವಿಶ್ವಾಸ ಸಂಪಾದಿಸಿದ್ದ. ಹೀಗಾಗಿ ಮಾ.7 ರಂದು ಮತ್ತೆ ತೆಂಗಿನಕಾಯಿ ಕೀಳುವುದಕ್ಕೆ ವೃದ್ಧೆ ಈತನನ್ನು ಕರೆದಿದ್ದರು.
ಇದರಂತೆ ಮನೆಗೆ ಬಂದ ಆರೋಪಿ ಮನೆಯಲ್ಲಿ ವೃದ್ಧೆ ಹೊರತುಪಡಿಸಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾನೆ. ಸಾಲ ಬಾಧೆಯಿಂದ ತತ್ತರಿಸಿದ್ದ ಸಭಾಪತಿಯ ಕಣ್ಣು ವೃದ್ಧೆಯ ಮೈಮೇಲಿದ್ದ ಚಿನ್ನದ ಸರದ ಮೇಲೆ ಬಿದ್ದಿದೆ. ಅದಕ್ಕಾಗಿ ಕೈಯಲ್ಲಿದ್ದ ತೆಂಗಿನ ಕಾಯಿ ಕತ್ತರಿಸುವ ಮಚ್ಚಿನಿಂದ ವೃದ್ಧೆಯ ಕತ್ತಿನ ಭಾಗದ ಮೇಲೆ ಹಲ್ಲೆ ನಡೆಸಿ 60 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ.
ಆರೋಪಿಯಿಂದ ವಶಕ್ಕೆ ಪಡೆದ ಚಿನ್ನದ ಸರ ಬಳಿಕ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ವೃದ್ಧೆಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತನಿಂದ 60 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಹಿಮ, ಮಂಜಿನಿಂದಾಗಿ ಅಮೆರಿಕದಲ್ಲಿ ಭೀಕರ ಸರಣಿ ಅಪಘಾತ ; ಮೂವರ ಸಾವು, 20 ಮಂದಿಗೆ ಗಾಯ