ಬೆಂಗಳೂರು: ಕಳೆದ ವರ್ಷ ಆಗಷ್ಟ್ನಲ್ಲಿ ಉಂಟಾಗಿದ್ದ ಪ್ರವಾಹ ಹಾನಿgಎ ಸಂಬಂಧಿಸಿದ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರ ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯಕ್ಕೆ ಮತ್ತೆ 1,869 ಕೋಟಿ ರೂಪಾಯಿ ಮಂಜೂರು ಮಾಡಿದೆ.
ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎನ್ಡಿಆರ್ಎಫ್ನ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದೇಶದ 7 ರಾಜ್ಯಗಳಿಗೆ ಹೆಚ್ಚುವರಿಯಾಗಿ 5,905 ಕೋಟಿ ರೂಪಾಯಿ ಅನುದಾನ ನೀಡಲು ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಕ್ಕೆ ಮೊನ್ನೆ ಪ್ರಧಾನಿ ಭೇಟಿ ನೀಡಿದ್ದ ವೇಳೆ ತುಮಕೂರಿನ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಯೋಜನೆಗಳಿಗೆ ₹50 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಬಹಿರಂಗ ವೇದಿಕೆಯಲ್ಲೇ ಪ್ರಧಾನಿ ಸಮ್ಮುಖದಲ್ಲಿ ಮನವಿ ಮಾಡಿದ್ದರು. ಆದರೂ ಅಂದು ಪ್ರಧಾನಿ ಇದಕ್ಕೆ ಸ್ಪಂದಿಸಿರಲಿಲ್ಲ.
ಈಗ ಕೇಂದ್ರ ಸರ್ಕಾರ ರಾಜ್ಯಕ್ಕೆ 1,869 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಈ ಹಿಂದೆ 1200 ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ಹಿಂದಿನ ಹಣ ಮತ್ತು ಇಂದು ಮಂಜೂರಾತಿಗೆ ಒಪ್ಪಿಗೆ ಸೂಚಿಸಿರುವ ಮೊತ್ತ ಸೇರಿಸಿದರೆ ರಾಜ್ಯಕ್ಕೆ ಒಟ್ಟು 3069 ಕೋಟಿ ರೂಪಾಯಿ ಅನುದಾನ ನೀಡಿದಂತಾಗಿದೆ. ರಾಜ್ಯದಿಂದ 35 ಸಾವಿರ ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
7 ರಾಜ್ಯಗಳಿಗೆ ಬಿಡುಗಡೆ ಮಾಡಿದ ಅನುದಾನದಲ್ಲಿ ಕರ್ನಾಟಕದ ಪಾಲೇ ಹೆಚ್ಚು:
- ಅಸ್ಸೋಂ 616.63 ಕೋಟಿ
- ಹಿಮಾಚಲ ಪ್ರದೇಶಕ್ಕೆ 284.93 ಕೋಟಿ
- ಕರ್ನಾಟಕಕ್ಕೆ 1,869 ಕೋಟಿ
- ಮಧ್ಯಪ್ರದೇಶಕ್ಕೆ 1,749 ಕೋಟಿ
- ಮಹಾರಾಷ್ಟ್ರ ಕ್ಕೆ 956.93 ಕೋಟಿ
- ತ್ರಿಪುರಾಕ್ಕೆ 62.32 ಕೋಟಿ
- ಉತ್ತರ ಪ್ರದೇಶಕ್ಕೆ 367.17 ಕೋಟಿ
ನೆರೆ ಪರಿಹಾರ ಮಂಜೂರು ಮಾಡುವ ಕುರಿತ ಇಂದಿನ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಣಕಾಸು, ಗೃಹ ಇಲಾಖೆ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.