ಬೆಂಗಳೂರು: ರಾಜ್ಯದ ರೈಲ್ವೆ ಯೋಜನೆಗಳು ಹಾಗು ಜವಳಿ ಯೋಜನೆಗಳ ಕುರಿತು ಕೇಂದ್ರ ಜವಳಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವೆ ದರ್ಶನಾ ಜರ್ದೋಶ್ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಭೇಟಿ ನೀಡಿದರು. ಕೇಂದ್ರ ಸಚಿವೆಯನ್ನು ಆತ್ಮೀಯವಾಗಿ ಸ್ವಾಗತ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಗತಿಯಲ್ಲಿರುವ ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಮಾತುಕತೆ ನಡೆಸಿದರು. ದ್ವಿಪಥ ಮಾರ್ಗ ನಿರ್ಮಾಣ, ಹೊಸ ಮಾರ್ಗ ಸಮೀಕ್ಷೆ ಸೇರಿದಂತೆ ಹಲವು ಯೋಜನೆಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಯೋಜನೆಗಳಿಗೆ ಭೂಸ್ವಾಧೀನ ವಿವಾದ, ಲಭ್ಯವಾದ ಜಾಗದ ಕುರಿತು ಮಾತುಕತೆ ನಡೆಸಿದರು. ಯೋಜನೆಗಳಿಗೆ ರಾಜ್ಯ ಶೇ.50 ರಷ್ಟು ಅನುದಾನವನ್ನು ಒದಗಿಸುತ್ತಿದ್ದು, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಕೇಳಿದ್ದಾರೆ. ಸಬ್ ಅರ್ಬನ್ ಯೋಜನೆ ಬಗ್ಗೆಯೂ ಸಿ ಎಂ ಮಾತುಕತೆ ನಡೆಸಿದ್ದಾರೆ. ನಂತರ ಜವಳಿ ಪಾರ್ಕ್, ಜವಳಿ ಉದ್ಯಮಕ್ಕೆ ಕೇಂದ್ರದ ಸಹಕಾರದ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ರೈಲ್ವೆ ಯೋಜನೆ ಕುರಿತು ಸಿಎಂ ಬೊಮ್ಮಾಯಿ ಸಭೆ ಕರೆದಿದ್ದು, ರಾಜ್ಯಕ್ಕೆ ಘೋಷಣೆಯಾಗಿರುವ ರೈಲ್ವೆ ಯೋಜನೆಗೆ ವೇಗ ಒದಗಿಸಬೇಕು, ಸಬ್ ಅರ್ಬನ್ ಯೋಜನೆ ಶೀಘ್ರ ಆರಂಭಿಸಬೇಕು ಇತರೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ :ಉಲ್ಕೆಯಲ್ಲ, ಉಪಗ್ರಹ..: ಸ್ಥಳಕ್ಕೆ ಧಾವಿಸಿ ಅವಶೇಷ ಸಂಗ್ರಹಿಸಿದ ತಜ್ಞರು