ಬೆಂಗಳೂರು: ನಮ್ಮ ರೈತರ ಆದಾಯ ದ್ವಿಗುಣಗೊಳಿಸಲು ಸ್ವಾತಂತ್ರ್ಯನಂತರ ಕರೆ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ನೂರಾರು ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದು ರಾಜ್ಯಸಭೆ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಘೋಷಣೆಗಳು ಕೇವಲ ಘೋಷಣೆಯಾಗಿ ಇದ್ದರೆ, ನಮ್ಮ ಸರ್ಕಾರವು ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 1,32,523 ಕೋಟಿ ರೂ. ಮೀಸಲಿಡಲಾಗಿದೆ. ಮಾರುಕಟ್ಟೆಯಲ್ಲಿ ಖರೀದಿ ದರ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನ ಖರೀದಿಸುತ್ತಿದ್ದು, 1.63 ಲಕ್ಷ ರೈತರಿಂದ 1,208 ಲಕ್ಷ ಟನ್ ಭತ್ತ ಮತ್ತು ಗೋಧಿ ಖರೀದಿಸಿ ನೇರವಾಗಿ ರೈತರ ಖಾತೆಗಳಿಗೆ 2.37 ಲಕ್ಷ ಕೋಟಿ ಹಣವನ್ನು ಜಮಾ ಮಾಡಿದ್ದು ಒಂದು ದಾಖಲೆ. 15,500 ಕೋಟಿ ರೂಪಾಯಿಯನ್ನು ಈ ಬಾರಿಯ ಬಜೆಟ್‍ನಲ್ಲಿ ರೈತರ ಬೆಳೆ ವಿಮೆಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಹಲವು ಯೋಜನೆಗಳ ಮೂಲಕ ಕೃಷಿಕರಿಗೆ ಅನುದಾನ :ಫಸಲ್ ಬಿಮಾ ಯೋಜನೆಯಡಿ ಸುಮಾರು 2.24 ಲಕ್ಷ ರೈತರಿಗೆ 28,129 ಕೋಟಿ ರೂಪಾಯಿ ಪರಿಹಾರ ಲಭಿಸಿದೆ. ಮಣ್ಣಿನ ಫಲವತ್ತತೆ ಕಾಪಾಡುವುದು, ಮಣ್ಣಿನ ಕುರಿತ ವರದಿ ಆಧಾರದಲ್ಲಿ ಬೆಳೆ ಬೆಳೆಯಲು ಮಾರ್ಗದರ್ಶನ ನೀಡಲು 11.98 ಕೋಟಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ನೀಡಲಾಗಿದೆ.ಕಡಿಮೆ ನೀರಿನಿಂದ ಹೆಚ್ಚು ಬೆಳೆ ತೆಗೆಯುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 12,954 ಕೋಟಿ ರೂಪಾಯಿ ಪ್ರಕಟಿಸಿದ್ದಾರೆ. ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 10,433 ಕೋಟಿ ರೂಪಾಯಿಯನ್ನು ಘೋಷಿಸಿದ್ದಾರೆ. ರಸಗೊಬ್ಬರ ಸಬ್ಸಿಡಿಗೆ 63,222 ಕೋಟಿ ರೂಪಾಯಿ ಬಿಡುಗಡೆ ಮಾಡಿ ಡಿಎಪಿ ಪ್ರತಿ ಬ್ಯಾಗ್ 2,400 ರೂಪಾಯಿ ಬದಲಾಗಿ 1,200 ರೂಪಾಯಿಗೆ ದೊರಕುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿವರ್ಷ 68 ಸಾವಿರ ಕೋಟಿಗಿಂತ ಹೆಚ್ಚು ಹಣವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗುತ್ತಿದೆ. ಕೃಷಿಗೆ ಪೂರಕವಾದ ಚಟುವಟಿಕೆಗೆ ಆದ್ಯತೆ ಕೊಡಲಾಗುತ್ತಿದೆ. ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ 2,942 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಒಂದು ಸಾವಿರ ಎಪಿಎಂಸಿಗಳನ್ನು ಉನ್ನತೀಕರಿಸಿ ಆನ್‍ಲೈನ್ ಟ್ರೇಡಿಂಗ್ ಮಾಡುವ ಇ ನಾಮ್ ವ್ಯವಸ್ಥೆ ಜಾರಿಗೊಳಿಸಿದ್ದು, 1.71 ಕೋಟಿ ರೈತರು ಅದರಡಿ ನೋಂದಾಯಿಸಿಕೊಂಡಿದ್ದಾರೆ. 1.71 ಲಕ್ಷ ವ್ಯಾಪಾರಿಗಳೂ ಇದರಡಿ ಹೆಸರು ನೋಂದಾಯಿಸಿದ್ದಾರೆ. 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 2 ಹೆಕ್ಟೇರ್ಗಿಂತ ಕಡಿಮೆ ಪ್ರದೇಶ ಇರುವ ರೈತರಿಗೆ ಟ್ರ್ಯಾಕ್ಟರ್, ಡ್ರೋನ್, ಕೃಷಿ ಸಲಕರಣೆಗಳನ್ನು ಈ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ನೀಡಲು ಯೋಜಿಸಲಾಗಿದೆ ಎಂದರು.