ಬೆಂಗಳೂರು: ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಬೇಡಿಕೆಗೆ ಅನುಸಾರವಾಗಿ ರೆಮ್ಡಿಸಿವಿರ್ ಔಷಧಗಳ ಮರುಹಂಚಿಕೆ ಮಾಡಿದ್ದು, ರಾಜ್ಯದ ಹಂಚಿಕೆಯನ್ನು 1.22 ಲಕ್ಷಕ್ಕೆ ಏರಿಕೆ ಮಾಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಸದಾನಂದ ಗೌಡ, ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಇಂದು ರೆಮ್ಡಿಸಿವಿರ್ ಮರುಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವೈಯಲ್ಸ್‌ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ನಾನು ನಿರ್ವಹಿಸುವ ಔಷಧ ಇಲಾಖೆ & ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿಯು ಈ ನಿರ್ಣಯ ಕೈಗೊಂಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, ನೆರವು ನೀಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಗೆದ್ದ 104 ವರ್ಷದ ವೃದ್ಧ: ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ!
ಪ್ರಧಾನಿಗೆ ಸಿಎಂ ಬಿಎಸ್‌ವೈ ಕೃತಜ್ಞತೆ
ಇತ್ತ ಪ್ರಧಾನಮಂತ್ರಿ ಮೋದಿ ಜೊತೆ ನಡೆದ ವರ್ಚ್ಯುವಲ್ ಸಭೆಯಲ್ಲಿ ತಮ್ಮ ಕೋರಿಕೆಯಂತೆ ರಾಜ್ಯಕ್ಕೆ ಏಪ್ರಿಲ್ 30ರವರೆಗೆ ರೆಮ್ಡಿಸಿವಿರ್ ಔಷಧವನ್ನು 50,000 ದಿಂದ 1,22,000 ಏರಿಸಲಾಗಿದೆ. ದೈನಂದಿನ ಆಮ್ಲಜನಕದ ಹಂಚಿಕೆಯನ್ನು 300 ಮೆ.ಟನ್ ನಿಂದ 800 ಮೆ.ಟನ್‌ಗೆ ಕೇಂದ್ರ ಸರ್ಕಾರ ಹೆಚ್ಚಿಸಿರುವುದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಕೋವಿಡ್ ವಿರುದ್ಧ ರಾಜ್ಯದ ಹೋರಾಟದಲ್ಲಿ ತ್ವರಿತ ಮತ್ತು ಸಮಯೋಚಿತ ನೆರವು ಒದಗಿಸಿದ್ದಕ್ಕಾಗಿ ರಾಜ್ಯದ ಜನತೆಯ ಪರವಾಗಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡರಿಗೆ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.