ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತಕ್ಕೆ ರಾಜ್ಯ ಕಾಂಗ್ರೆಸ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಕೇಂದ್ರದ ಜೊತೆಗಿದೆ. ಆದರೆ, ದೇಶದ ಜನರಿಗೆ ಪ್ರಧಾನಿ ಮೋದಿ ಅವರು ಕೊಟ್ಟ ಭರವಸೆ ಏನು? ಎಂದು ಪ್ರಶ್ನಿಸಿದೆ.
ಕೇರಳ ಒಂದೇ ರಾಜ್ಯ ಒಂದು ವಾರದ ಹಿಂದೆಯೇ 20,000 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಇಡೀ ದೇಶಕ್ಕೆ ಕೇವಲ 15,000 ಕೋಟಿ ರೂ. ಘೋಷಿಸಿರುವುದು 130 ಕೋಟಿ ಜನತೆಗೆ ಸಾಕಾಗುವುದೇ? ಎಂಬ ಪ್ರಶ್ನೆಯನ್ನು ಹಾಕಿದೆ.
ಪಕ್ಷದ ಗುಣಗಾನ ದೇಶದಲ್ಲಿ ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಣ್ಣನೆಯನ್ನ ಕಾಂಗ್ರೆಸ್ ಮಾಡಿದೆ. ಪಂಜಾಬ್ ಸರ್ಕಾರದ ಎಲ್ಲಾ ಮಂತ್ರಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಪಂಜಾಬ್ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಸಂಪೂರ್ಣ ಕರ್ಫ್ಯೂ ಹಾಕಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಗೊಳಿಸಲಾಗುತ್ತಿದೆ ಎಂದಿದೆ.
ಛತ್ತೀಸ್ಗಢ ಕಾಂಗ್ರೆಸ್ ಸರ್ಕಾರವು ಕರೋನಾ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ತಯಾರಾಗಿದೆ. ಕ್ವಾರಂಟೈನ್ ಸೌಕರ್ಯವು 1500 ಜನತೆಗೆ ತಯಾರಾಗಿದೆ. 450 ರೋಗಿಗಳ ಚಿಕಿತ್ಸೆಗೆ ತಯಾರಿ ಮಾಡಲಾಗಿದೆ. 60 ಹಾಸಿಗೆಗಳ ಹೊಸ ಆಸ್ಪತ್ರೆ ತಯಾರಾಗಿದೆ. ಆರೋಗ್ಯ ಸಹಾಯಕರಿಗೆ ವಿಶೇಷ ಭತ್ಯೆ ಕೊಡಲಾಗುವುದು ಎಂದು ತಿಳಿಸಿದೆ ಎಂಬ ಮಾಹಿತಿ ನೀಡಿದೆ.
ರಾಜಸ್ಥಾನ ಸರ್ಕಾರವು ಒಂದು ಕೋಟಿ ಜನತೆಗೆ ಉಚಿತ ಗೋಧಿಯನ್ನು ವಿತರಿಸುತ್ತಿದೆ. ಆಹಾರದ ಪೊಟ್ಟಣಗಳನ್ನು ಬೀದಿಬದಿ ವ್ಯಾಪಾರಿಗಳು ದಿನಗೂಲಿ ಕಾರ್ಮಿಕರಿಗೆ ವಿತರಿಸಲಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಾಮಾಜಿಕ ಭದ್ರತೆಯ ಪಿಂಚಣಿಯನ್ನು ಜಾರಿಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ ತನ್ನ ಟ್ವೀಟ್ ಖಾತೆಯಲ್ಲಿ ಒದಗಿಸಿದೆ.