ಬೆಂಗಳೂರು:15 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. 15-17 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದು, ಶೇಕಡಾ 100ರಷ್ಟು ಪೂರೈಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಈ ವಿಚಾರ ಹಂಚಿಕೊಂಡಿರುವ ಸುಧಾಕರ್, ಗದಗ ಜಿಲ್ಲೆ ಶೇಕಡಾ ನೂರರಷ್ಟು ಸಾಧನೆ ಮಾಡಲಾಗಿದೆ. ಉಳಿದಂತೆ ಒಟ್ಟಾರೆ ರಾಜ್ಯದಲ್ಲಿ ಶೇಕಡಾ 72ರಷ್ಟು ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಿದೆ ಎಂದಿದ್ದಾರೆ. 15 ರಿಂದ 17 ವರ್ಷದ ಮಕ್ಕಳಿಗೆ ನೀಡುವ ಮೊದಲ ಹಂತದ ಲಸಿಕೆ ಇದಾಗಿದ್ದು, ಆದಷ್ಟು ತ್ವರಿತವಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಸಾಧನೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಜನವರಿ 3ರಿಂದ 15ರಿಂದ 17 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗಿದೆ. 2007ರಲ್ಲಿ ಜನಿಸಿರುವ ಮತ್ತು 2007ಕ್ಕೂ ಮುನ್ನ ಜನಿಸಿರುವ ಮಕ್ಕಳು ಕೋವಾಕ್ಸಿನ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಈ ಮಕ್ಕಳಿಗೆ ಈಗಾಗಲೇ ಚಾಲ್ತಿಯಲ್ಲಿರುವಂತೆ ಕೋವಾಕ್ಸಿನ್ ಲಸಿಕೆ 2 ಡೋಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುವುದು. ವ್ಯಾಕ್ಸಿನೇಷನ್ಗೆ ಮುನ್ನ ಮಕ್ಕಳ ಪೋಷಕರಿಗೆ ವಿಶೇಷ ಜಾಗೃತಿ ಸಭೆಗಳನ್ನು ನಡೆಸಿ ಲಸಿಕಾಕರಣದ ಮಹತ್ವ ಮತ್ತು ಅವಶ್ಯಕತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮೂಲಕ ಸಂದೇಹ ನಿವಾರಣೆಯ ಕಾರ್ಯವನ್ನು ಸರ್ಕಾರ ಮಾಡಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು.. ಕಾಲೇಜ್ ಗೇಟ್ ಬಂದ್ ಮಾಡಿದ ಪ್ರಾಂಶುಪಾಲ
ಫಲಾನುಭವಿ ಮತ್ತು ಮಕ್ಕಳು ಸ್ವಂತ ದೂರವಾಣಿ ಸಂಖ್ಯೆ ಬಳಸಿ ಅಥವಾ ಕೋವಿನ್ನಲ್ಲಿ ಈಗಾಗಲೇ ಇರುವ ತಂದೆ-ತಾಯಿಗಳ ಪೋಷಕರ ಅಕೌಂಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದು ಯಾವುದೂ ಲಭ್ಯವಿಲ್ಲದಿದ್ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕೋವಿಡ್-19 ವ್ಯಾಕ್ಸಿನೇಷನ್ ಪ್ರಕ್ರಿಯೆಗಾಗಿ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಬಳಸಿ ಫೋಟೋ ಐಡಿಯನ್ನು ಹಾಜರುಪಡಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯವನ್ನು ಮಾಡುವಂತೆ ಸರ್ಕಾರ ಸೂಚಿಸಿದೆ.