ಕರ್ನಾಟಕ

karnataka

ETV Bharat / city

CD CASE: ಜಾಮೀನು ಕೋರಿ ನರೇಶ್, ಶ್ರವಣ್ ಅರ್ಜಿ.. ತೀರ್ಪು ಕಾಯ್ದಿರಿಸಿದ ಕೋರ್ಟ್ - ಹಿರಿಯ ವಕೀಲ ಎ.ಎಸ್‌ ಪೊನ್ನಣ್ಣ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್​ ಜೂನ್​ 8ಕ್ಕೆ ಕಾಯ್ದಿರಿಸಿದೆ.

cd-case
ಜಾಮೀನು ಕೋರಿ ನರೇಶ್, ಶ್ರವಣ್ ಅರ್ಜಿ

By

Published : Jun 2, 2021, 10:43 PM IST

ಬೆಂಗಳೂರು:ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರೀಕ್ಷಣಾ ಜಾಮೀನು ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಸಿಟಿ ಸಿವಿಲ್‌ ಆ್ಯಂಡ್ ಸೆಷನ್ಸ್‌ ಕೋರ್ಟ್ ತೀರ್ಪನ್ನು ಜೂನ್​ 8ಕ್ಕೆ ಕಾಯ್ದಿರಿಸಿದೆ.

ಓದಿ: ಸಿಡಿ ಕೇಸ್​​​: ನರೇಶ್ ಗೌಡ, ಶ್ರವಣ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ ಎಸ್ಐಟಿ

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನರೇಶ್‌ ಗೌಡ ಹಾಗೂ ಶ್ರವಣ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶ ಲಕ್ಷ್ಮಿನಾರಾಯಣ್‌ ಭಟ್‌ ವಿಚಾರಣೆ ನಡೆಸಿದರು. ಈ ವೇಳೆ ಎಸ್‌ಐಟಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಆಕ್ಷೇಪಣೆ ಪರಿಶೀಲಿಸಿದ ನ್ಯಾಯಾಧೀಶರು, ರಮೇಶ್‌ ಜಾರಕಿಹೊಳಿ ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದಾರೆ? ಅದನ್ನೇಕೆ ದೂರಿನಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲರು ಸಮರ್ಥನೆ ನೀಡಲು ಪ್ರಯತ್ನಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್‌ ಪೊನ್ನಣ್ಣ ವಾದಿಸಿ, ಇದು ರಾಜಕೀಯ ಪ್ರೇರಿತ ಪ್ರಕರಣ. ಅತ್ಯಾಚಾರ ಆರೋಪ ಹೊತ್ತಿರುವ ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ಅರ್ಜಿದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣ ದಾಖಲಿಸುವ ಮೂಲಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರಕಿಹೊಳಿ ಅವರನ್ನು ಸಂತ್ರಸ್ತರೆಂಬಂತೆ ತೋರಿಸಲಾಗಿದೆ.

ರಮೇಶ್‌ ಜಾರಕಿಹೊಳಿ ಎಸ್‌ಐಟಿ ಮುಂದೆ ಸಮ್ಮತಿಯಿಂದಲೇ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಹಾಗಿದ್ದೂ, ಎಸ್‌ಐಟಿ ಪೊಲೀಸರು ಜಾರಕಿಹೊಳಿ ರಕ್ಷಿಸಲು ಸಂತ್ರಸ್ತ ಯುವತಿ ಹಾಗೂ ಅರ್ಜಿದಾರರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಅಲ್ಲದೇ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರ್ಜಿದಾರರು, ರಮೇಶ್‌ ಜಾರಕಿಹೊಳಿ ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದರು. ಇದೀಗ ಪೊಲೀಸರು ಹಣ ವಸೂಲಿ ಮಾಡಿಬಿಟ್ಟಿದ್ದಾರೆ ಎಂದು ಹೇಳುವ ಮೂಲಕ ಮೂಲ ಆರೋಪವನ್ನೇ ಬದಲಿಸಿದ್ದಾರೆ. ಹಾಗಿದ್ದೂ, ರಮೇಶ್‌ ಜಾರಕಿಹೊಳಿ ಹಣ ನೀಡಿದ್ದರೆ, ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದರೆಂದು ತಿಳಿಸಬೇಕಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67ಎ ಅಡಿ ದೂರು ದಾಖಲಿಸಬೇಕಿದ್ದಲ್ಲಿ, ದೃಶ್ಯಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಅಪ್‌ಲೋಡ್‌ ಮಾಡಿರಬೇಕು. ಆದರೆ, ಯಾರು ಅಪ್‌ಲೋಡ್‌ ಮಾಡಿದರೆಂದು ರಮೇಶ್‌ ಜಾರಕಿಹೊಳಿ ಸೇರಿದಂತೆ ಯಾರೂ ತಿಳಿಸಿಲ್ಲ. ಹೀಗಿರುವಾಗ ಸೆಕ್ಷನ್‌ 67ಎ ಅಡಿ ಹೇಗೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊನ್ನಣ್ಣ ವಾದಿಸಿದರು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ತೀರ್ಪನ್ನು ಜೂನ್‌ 8ಕ್ಕೆ ಕಾಯ್ದಿರಿಸಿತು.

ABOUT THE AUTHOR

...view details